ಮೃತ ಸಂತ್ರಸ್ತರ ವಿಮಾ ಪರಿಹಾರ ಪಡೆಯಲು ವಿವಾಹಿತ ಪುತ್ರಿಯರೂ ಅರ್ಹರೇ..? ಹೈಕೋರ್ಟ್ ಕೊಟ್ಟ ತೀರ್ಪಿದು
ಬೆಂಗಳೂರು: ಅಪಘಾತ ಪ್ರಕರಣಗಳಲ್ಲಿ ಮೃತ ಸಂತ್ರಸ್ತರ ಪರಿಹಾರ ಪಡೆಯಲು ವಿವಾಹಿತ ಪುತ್ರಿಯರೂ ಅರ್ಹರಾಗಿದ್ದಾರೆ. ವಿಮಾ ಪರಿಹಾರ ಪಡೆಯಲು ಹೆಣ್ಣು ಗಂಡು ಎಂಬ ಭೇದವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪಘಾತ ಪ್ರಕರಣದಲ್ಲಿ ಮೃತ ಮಹಿಳೆಯ ವಿವಾಹಿತ ಪುತ್ರಿಯರಿಗೂ ಪರಿಹಾರ ಘೋಷಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಪೋಷಕರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಸುದಾರರಿಗೆ ಪರಿಹಾರ ವಿತರಿಸುವಾಗ ಗಂಡು ಹೆಣ್ಣು ಮಕ್ಕಳು ಎಂಬ ಭೇದ ಮಾಡಲು ಸಾಧ್ಯವಿಲ್ಲ. ಗಂಡು ಮಕ್ಕಳು ಪರಿಹಾರ ಕೋರಬಹುದು ಎಂದಾದರೆ ವಿವಾಹಿತ ಹೆಣ್ಣು ಮಕ್ಕಳೂ ಸಹ ಪರಿಹಾರ ಕೋರಬಹುದು ಎಂದು ಅಭಿಪ್ರಾಯಿಸಿದೆ.
ಪ್ರಕರಣದ ವಿವರ
2012ರಲ್ಲಿ ರೇಣುಕಾ ಎಂಬವರು ಹುಬ್ಬಳ್ಳಿಯಿಂದ ಯಮನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟರು. ವಾಹನ ಅಪಘಾತ ಪರಿಹಾರ ಕೋರಿ ಅವರ ಪತಿ ಹಾಗೂ ವಿವಾಹಿತ ಹೆಣ್ಣು ಮಕ್ಕಳು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಪತಿ ಮತ್ತು ವಿವಾಹಿತ ಪುತ್ರಿಯರಿಗೆ ಒಟ್ಟು 5.91 ಲಕ್ಷ ರೂಪಾಯಿಯನ್ನು ಬಡ್ಡಿ ಸಹಿತ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿವಾಹಿತ ಪುತ್ರಿಯರಿಗೂ ಪರಿಹಾರ ನೀಡಿದ್ದ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿವಾಹಿತ ಪುತ್ರಿಯರು ಮೃತ ರೇಣುಕಾ ಅವರನ್ನು ಅವಲಂಬಿಸಿಲ್ಲ, ಹಾಗಾಗಿ, ಪರಿಹಾರಕ್ಕೆ ಅವರು ಅರ್ಹರಲ್ಲ ಎಂದು ವಿಮಾ ಸಂಸ್ಥೆ ವಾದ ಮಂಡನೆ ಮಾಡಿದರು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅವಲಂಬನೆ ಎಂಬುದು ಕೇವಲ ಆರ್ಥಿಕ ವಿಚಾರವನ್ನು ಮಾತ್ರ ಒಳಗೊಂಡಿಲ್ಲ ಅದು ಭಾವನಾತ್ಮಕ ವಿಚಾರಗಳಲ್ಲಿಯೂ ಅವಲಂಬನೆಗಳಿರುತ್ತದೆ. ಇನ್ನು ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಕೋರಲು ಅರ್ಹರಲ್ಲ ಎಂಬ ವಿಮಾ ಸಂಸ್ಥೆಯ ವಾದ ಸ್ವೀಕಾರಾರ್ಹವಲ್ಲ. ಗಂಡು ಮಕ್ಕಳು ಪರಿಹಾರ ಕೋರಬಹುದು ಎನ್ನುವುದಾದರೆ ವಿವಾಹಿತ ಹೆಣ್ಣು ಮಕ್ಕಳೂ ಪರಿಹಾರ ಕೋರಲು ಅರ್ಹರಾಗಿರುತ್ತಾರೆ. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಲು ಬರುವುದಿಲ್ಲ ಖಡಕ್ ತೀರ್ಪು ನೀಡಿದೆ.
ವಯಸ್ಕ, ವಿವಾಹಿತ ಮತ್ತು ಸಂಪಾದನೆ ಮಾಡುತ್ತಿರುವ ಮಕ್ಕಳೂ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಮೃತ ವ್ಯಕ್ತಿಯ ಅವಲಂಬಿತರೇ ಎಂಬ ಒಂದೇ ಅಂಶದ ಮೇಲೆ ಪರಿಹಾರ ನಿಗದಿ ಮಾಡಬೇಕು ಎಂಬುದು ಸರಿಯಲ್ಲ. ಈ ಕಾರಣದಿಂದ ವಿವಾಹಿತ ಪುತ್ರಿಯರೂ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದ ನ್ಯಾಯಪೀಠವು, ನ್ಯಾಷನಲ್ ಇನ್ಸುರೆನ್ಸ್ Vs ಬೀರೇಂದರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಮೃತ ವ್ಯಕ್ತಿಯ ವಾರಿಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿ ವಿಮಾ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
