07/03/2026

Law Guide Kannada

Online Guide

ಅಪ್ಪ ಮಾಡಿದ್ದ ಸಾಲಕ್ಕೆ ಮಗನೂ ಬಾಧ್ಯಸ್ಥ – ಹೈಕೋರ್ಟ್

ಬೆಂಗಳೂರು: ಅಪ್ಪ ಮಾಡಿದ್ದ ಸಾಲಕ್ಕೆ ಮಗ ಭದ್ರತೆಯಾಗಿ ಚೆಕ್ ನೀಡಿದ್ದರೆ ಆ ಸಾಲಕ್ಕೆ ಮಗನೂ ಹೊಣೆಯಾಗಿರುತ್ತಾನೆ. ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ದಾವಣಗೆರೆಯ ಬಿ.ಟಿ. ದಿನೇಶ್ ಎಂಬವರು ತಮ್ಮ ಅಪ್ಪ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಭರವಸೆ ನೀಡಿದ್ದು, ಈ ಸಾಲದ ಪಾವತಿಯ ಖಾತ್ರಿಯಾಗಿ ಚೆಕ್ಕಗಳನ್ನು ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿ ಪ್ರಸಾದ್ ರಾಯ್ಕರ್ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ದಾವಣಗೆರೆ ಜೆಎಂಎಫ್ಸಿ ನ್ಯಾಯಾಲಯ ಅಪ್ಪನ ಕಾನೂನು ಬದ್ಧ ವಾರಿಸುದಾರರಾದ ಮಗ ಸಾಲ ಮರುಪಾವತಿ ಮಾಡಬೇಕು ಎಂದು ತೀರ್ಪು ನೀಡಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಈ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು. ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೂರುದಾರ ಪ್ರಸಾದ್ ರಾಯ್ಕರ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅಪ್ಪ ಮಾಡಿದ್ದ ಸಾಲಕ್ಕೆ ಮಗ ಭದ್ರತೆಯಾಗಿ ಚೆಕ್ ನೀಡಿದ್ದರೆ, ಆತನೂ ಈ ಸಾಲಕ್ಕೆ ಬಾಧ್ಯಸ್ಥನಾಗುತ್ತಾನೆ ಹಾಗೂ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಪ್ರಕಾರ ಮಗ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ತೀರ್ಪು ನೀಡಿದೆ.

ಚೆಕ್ ನೀಡಿದ ಬಳಿಕ ಕೇವಲ 10 ಸಾವಿರ ರೂ. ನೀಡಿದ್ದು, ಆ ಬಳಿಕ ತಮ್ಮ ತಂದೆ ಮಾಡಿದ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿರುವುದು ಸರಿಯಲ್ಲ. ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ಹಿನ್ನೆಲೆ
ದಾವಣಗೆರೆಯ ನಿವಾಸಿಯಾದ ದಿನೇಶ್ ಎಂಬುವವರ ತಂದೆ ಭರಮಪ್ಪ ಎಂಬುವರಿಂದ ಪ್ರಸಾದ್ ಎಂಬವವರು 2003ರ ಮಾರ್ಚ್ 7ರಂದು 2.6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಶೇಕಾಡ 2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಪ್ರಾಮಿಸರಿ ನೋಟ್ ಬರೆದು ಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪ ಸಾವನ್ನಪ್ಪಿದರು.

ಮೃತಪಟ್ಟ ಸಂದರ್ಭದಲ್ಲಿ ಈ ಸಾಲದ ಮೊತ್ತ ಬಡ್ಡಿ ಸೇರಿ 4.5 ಲಕ್ಷ ರೂಪಾಯಿ ಆಗಿತ್ತು. ಆ ಬಳಿಕ, ಭರಮಪ್ಪ ಅವರ ಪುತ್ರ ದಿನೇಶ್ 10 ಸಾವಿರ ರೂ. ಮರುಪಾವತಿ ಮಾಡಿ ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಎರಡು ಚೆಕ್ಗಳನ್ನು ನೀಡಿದ್ದರು. ಈ ಎರಡೂ ಚೆಕ್ಗಳು ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಕಾರಣಕ್ಕೆ ಅಮಾನ್ಯಗೊಂಡು ಹಿಂತಿರುಸಲಾಗಿತ್ತು. ಈ ಬಗ್ಗೆ ದೂರುದಾರ ಪ್ರಸಾದ್ ಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.