ಸರಕು ಸಾಗಣೆ ವಾಹನ ಅಪಘಾತದ ವೇಳೆ ಪ್ರಯಾಣಿಕ ಗಾಯಗೊಂಡರೆ ವಾಹನದ ಮಾಲೀಕನಿಂದಲೇ ಪರಿಹಾರ – ಹೈಕೋರ್ಟ್
ಬೆಂಗಳೂರು: ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೇ ಅಥವಾ ಮೃತಪಟ್ಟರ ಈ ವೇಳೆ ಆ ವಾಹನದ ಮಾಲೀಕರು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಪರಿಹಾರದಲ್ಲಿ ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಕರಣ(ಎಂಎಸಿಟಿ) ಆದೇಶ ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮೆ ನೀಡಿದ್ದ ‘ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ’ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೆ ಅಥವಾ ಮೃತಪಟ್ಟ ಸಂದರ್ಭದಲ್ಲಿ, ಅಂತಹ ಸಂದರ್ಭದಲ್ಲಿ ಆ ವಾಹನದ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು. ಅಪಘಾತಕ್ಕೀಡಾದ ವಾಹನದ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಪ್ರಕರಣದ ವಿವರ…
2010ರ ಡಿಸೆಂಬರ್ 31ರಂದು ಅರ್ಜಿದಾರರು ಚುನಾವಣಾ ಪ್ರಚಾರ ಕಾರ್ಯ ಮುಗಿದ ಬಳಿಕ ಸರಕು ಸಾಗಣೆ ಟೆಂಪೋ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಮದ್ದೂರು ಬಳಿಯ ಕೆ. ಎಂ. ದೊಡ್ಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಬಸ್ಸೊಂದು ಟೆಂಪೋಗೆ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಮಳವಳ್ಳಿಯ ನಿವಾಸಿ ಬಸವರಾಜು ಎಂಬುವರು ಗಂಭೀರವಾಗಿ ಗಾಯಗೊಂಡು ಶಾಶ್ವತವಾಗಿ ಅಂಗಾಂಗ ಊನವುಂಟಾಗಿತ್ತು. ಇದರಿಂದ ಪರಿಹಾರ ಕೋರಿ ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣ ಸಂಬಂಧ ಚಾಲಕರು ಮತ್ತು ವಿಮಾ ಕಂಪನಿಯ ವಾದವನ್ನು ಆಲಿಸಿದ್ದ ನ್ಯಾಯಾಧಿಕರಣ, ಎರಡೂ ವಾಹನಗಳ ಚಾಲಕರ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದಾರೆ. ಆದ್ದರಿಂದ ಎರಡು ವಾಹನಗಳ ವಿಮಾ ಕಂಪನಿಗಳು ಶೇ. 50ರಂತೆ 1,34,000 ಪಾವತಿಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮಾ ಪಾವತಿಸಿದ್ದ ದಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಪ್ರಕರಣದಲ್ಲಿ ಪರಿಹಾರಕ್ಕೆ ಅರ್ಹವಾಗಿರುವ ವ್ಯಕ್ತಿ ಚುನಾವಣಾ ಕರ್ತವ್ಯ ಮುಗಿಸಿಕೊಂಡು ಊರಿಗೆ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಟೆಂಪೋದಲ್ಲಿ ಸಾಗಿಸುತ್ತಿದ್ದ ಸರಕುಗಳಿಗೆ ಗಾಯಗೊಂಡ ವ್ಯಕ್ತಿ ಮಾಲೀಕರಾಗಿರಲಿಲ್ಲ. ಹಾಗಾಗಿ, ಮೋಟಾರು ವಾಹನ ಕಾಯಿದೆ ಸೆಕ್ಷನ್ 147ರಡಿಯಲ್ಲಿ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುವ ಅನಪೇಕ್ಷಿತ ಪ್ರಯಾಣಿಕರಿಗೆ ಸಾವು ಇಲ್ಲವೇ ಗಾಯವಾದಲ್ಲಿ ವಿಮಾ ಕಂಪನಿ ಪರಿಹಾರ ಪಾವತಿಸಲು ಹೊಣೆಗಾರರಾಗುವುದಿಲ್ಲ. ಆದರೆ, ಘಟನೆಗೆ ಎರಡೂ ವಾಹನಗಳ ವಿಮಾದಾರರು ಜಂಟಿಯಾಗಿ ಮತ್ತು ಪ್ರತ್ಯೇಕ ವಾಗಿ ಹೊಣೆಗಾರರಾಗಿದ್ದಾರೆಂದು ಎಂಎಸಿಟಿ ತೀರ್ಪು ನೀಡಿರುವುದು ತಪ್ಪಾಗಿದೆ, ಅಭಿಪ್ರಾಯ ವ್ಯಕ್ತಪಡಿಸಿತು. ಗಾಯಗೊಂಡಿರುವ ವ್ಯಕ್ತಿಯ ವಿರುದ್ಧದ ಎರಡೂ ವಾಹನಗಳ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಎರಡೂ ಚಾಲಕರ ಸಮಾನ ನಿರ್ಲಕ್ಷದಿಂದ ಅಪಘಾತ ಉಂಟಾದಲ್ಲಿ ಸಂತ್ರಸ್ತರಿಗೆ ಸಮಾನ ಪರಿಹಾರ ಪಡೆಯಲು ಅರ್ಹನಾಗಿದ್ದಾರೆ.
ಆದ್ದರಿಂದ ಮಾರ್ಪಾಡು ನ್ಯಾಯಾಧಿಕರಣದ ಆದೇಶ ಮಾಡುತ್ತಿದ್ದು, ಅಪಘಾತದಲ್ಲಿ ಭಾಗಿಯಾಗಿರುವ ಬಸ್ ಮಾಲೀಕ, ಬಸ್ ವಿಮಾದಾರ ಕಂಪನಿ ಒಟ್ಟಾಗಿ ಶೇ.50ರಷ್ಟು ಮತ್ತು ಸರಕು ಸಾಗಣೆ ಟೆಂಪೋ ಮಾಲೀಕ ಶೇ.50ರಷ್ಟು ಪರಿಹಾರ ಪಾವತಿಸಬೇಕು,” ಎಂದು ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
