ಸಿವಿಲ್ ಪ್ರಕರಣಕ್ಕೆ ಕ್ರಿಮಿನಲ್ ಬಣ್ಣ ಬಳಿದು ದುಡ್ಡು ವಸೂಲಿಗೆ ನಿಂತ್ರೆ ಕಠಿಣ ಪಾಠ – ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ
ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯ ಇತ್ಯರ್ಥಪಡಿಸುವ ಪೊಲೀಸರ ಕಾರ್ಯವೈಖರಿ ಮತ್ತೆ ಮತ್ತೆ ನಡೆಯುತ್ತಿದೆ. ಠಾಣೆಗಳನ್ನು ವ್ಯಾಪಾರಿ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಪೊಲೀಸ್ ಠಾಣೆಗಳೇನು ವ್ಯಾಪಾರಿ ಕೇಂದ್ರಗಳಲ್ಲ ಎಂದು ಹೈಕೋರ್ಟ್ ಪೊಲೀಸರಿಗೆ ಚಾಟಿ ಬೀಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಪೊಲೀಸರ ನಡವಳಿಕೆ ಬಗ್ಗೆ ಕಟುವಾಗಿ ಟೀಕಿಸಿತು
ಪೊಲೀಸ್ ಠಾಣೆಗಳೇನು ವ್ಯಾಪಾರಿ ಕೇಂದ್ರಗಳೇ…? ಪೊಲೀಸ್ ಠಾಣೆಗಳಿಗೆ ಬರುವ ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ಬಣ್ಣ ಬಳಿದು ದುಡ್ಡು ವಸೂಲಿ, ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಂದು ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರ ಮೂಲಕ ರಾಜ್ಯದ ಪೊಲೀಸರಿಗೆ ನ್ಯಾಯಪೀಠ ಈ ಖಡಗ್ ವಾರ್ನಿಂಗ್ ನೀಡಿತು.
ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಪೊಲೀಸ್ ಠಾಣೆಯಲ್ಲಿ ಸಿವಿಲ್ ವ್ಯಾಜ್ಯವನ್ನು ತೀರ್ಮಾನಿಸಲು ಪೊಲೀಸರಿಗೆ ಅಧಿಕಾರವನ್ನು ನೀಡಿದವರು ಯಾರು ಎಂದು ಪ್ರಶ್ನಿಸಿದ ನ್ಯಾಯಪೀಠವು, ಪೊಲೀಸರು ಸಿವಿಲ್ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಾಗಿ ಹೈಕೋರ್ಟ್ ಸಾಕಷ್ಟು ಪೀಠಗಳು ಹಲವು ಬಾರಿ ಆದೇಶ ನೀಡಿವೆ. ಆದರೂ, ಪೊಲೀಸರು ಮಾತ್ರ ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುತ್ತಲೇ ಬಂದಿದ್ದಾರೆ. ಇದು ಒಪ್ಪುವಂತಹುದಲ್ಲ ಎಂದು ಕಿಡಿಕಾರಿದೆ.
ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ದೂರುದಾರನ ಜೊತೆಗೆ ಕೈಜೋಡಿಸಿ ಕಳ್ಳಾಟ ಆಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಅಧಿಕಾರಿ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಒಂದು ತಿಂಗಳಲ್ಲಿ ವರದಿ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು. ಅಲ್ಲದೆ ತನಿಖಾಧಿಕಾರಿ ಕಾನೂನು ದುರ್ಬಳಕೆ ಮಾಡಿರುವ ಬಗ್ಗೆ ಅರ್ಜಿದಾರರು ತನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಡಿಸಿಪಿಗೆ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
