ಹೆಣ್ಣು ಮಕ್ಕಳಿಗೂ ಆಸ್ತಿ ಸಮಪಾಲು- ಮತ್ತೊಮ್ಮೆ ಸಮಾನತೆ ತತ್ವ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು: ಆಸ್ತಿ ವಿಭಜಿಸುವಾಗ ಹೆಣ್ಣು ಮಕ್ಕಳಿಗೂ ಸಮಪಾಲು ಎಂದು ಇತ್ತೀಚೆಗೆ ತೀರ್ಪು ನೀಡುವ ಮೂಲಕ ಕರ್ನಾಟಕ ಹೈಕೋರ್ಟ್ ಭಾರತದ ಸಂವಿಧಾನದಲ್ಲಿ ಘೋಷಿತವಾದ ಸಮಾನತೆಯ ತತ್ವವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣುಮಕ್ಕಳಿಗೆ ಪಾಲು ನೀಡಲು ನಿರಾಕರಿಸುವುದು ಭಾರತೀಯ ಸಂವಿಧಾನದ ಅನುಚ್ಛೇದ 14 (ಸಮಾನತೆಯ ಹಕ್ಕು) ಮತ್ತು ಅನುಚ್ಛೇದ 15 (ಲಿಂಗ ಆಧಾರಿತ ತಾರತಮ್ಯದ ನಿಷೇಧ) ಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ನೇತೃತ್ವದ ಏಕಸದಸ್ಯ ಪೀಠವು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆಗೆ ಮುಂಚೆ ನಿಧನರಾದ ಹೆಣ್ಣುಮಕ್ಕಳ ಉತ್ತರಾಧಿಕಾರಿಗಳಿಗೂ ಸಮಾನ ಆಸ್ತಿ ಹಕ್ಕುಗಳಿವೆ ಎಂದು ಕೋರ್ಟ್ ತೀರ್ಪು ನೀಡಿದೆ.
ಏನಿದು ಪ್ರಕರಣ
ಗದಗ ನ್ಯಾಯಾಲಯವು, ಚನ್ನಬಸಪ್ಪ ಅವರ ಮೃತ ಸಹೋದರಿಯರಾದ ನಾಗವ್ವ ಮತ್ತು ಸಂಗವ್ವ ಅವರ ಉತ್ತರಾಧಿಕಾರಿಗಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಆದೇಶಿಸಿತ್ತು.ಗದಗ ಜಿಲ್ಲೆಯ ನರಗುಂದ ತಾಲೂಕಿನ ಚನ್ನಬಸಪ್ಪ ಹೊಸಮನಿ ಎಂಬುವವರು ಸ್ಥಳೀಯ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿದಾರರ ವಾದವೆಂದರೆ, 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆಗೆ ಮುಂಚೆ ನಿಧನರಾದವರಿಗೆ ಈ ಹಕ್ಕು ಅನ್ವಯವಾಗುವುದಿಲ್ಲ ಎಂಬುದಾಗಿತ್ತು. ಈ ವಾದವನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು ಸಂಪೂರ್ಣವಾಗಿ ತಿರಸ್ಕರಿಸಿತು.
ಕಾನೂನಿನ ವಿಶ್ಲೇಷಣೆ: ಸಮಾನತೆಯ ಹಕ್ಕಿನ ಮೇಲೆ ಒತ್ತು
“ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಆಸ್ತಿ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಿರಬಾರದು” ಎಂದು ಸ್ಪಷ್ಟವಾಗಿ ತಿಳಿಸಿದ ನ್ಯಾಯಪೀಠವು, 2005ರ ಕಾಯಿದೆಗೆ ಮುಂಚೆ ಮರಣಹೊಂದಿದ ಗಂಡುಮಕ್ಕಳ ಉತ್ತರಾಧಿಕಾರಿಗಳಿಗೆ ಆಸ್ತಿಯ ಹಕ್ಕು ದೊರೆತಿದ್ದರೆ, ಇದೇ ನಿಯಮವನ್ನು ಹೆಣ್ಣುಮಕ್ಕಳಿಗೂ ಅನ್ವಯಿಸಬೇಕು ಎಂದು ನ್ಯಾಯಾಲಯವು ಒತ್ತಿಹೇಳಿದೆ.
ತೀರ್ಪಿನ ಮಹತ್ವದ ಅಂಶಗಳು
ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ತಾರತಮ್ಯವಿರಬಾರದು….
ತಂದೆಯ ಆಸ್ತಿಯಲ್ಲಿ ಮಗಳ ಪಾಲು, ಅವಳ ಮರಣಾನಂತರ ಅವಳ ಉತ್ತರಾಧಿಕಾರಿಗಳಿಗೆ (ವಂಶಸ್ಥರಿಗೆ) ಸಿಗಬೇಕು.
ಲಿಂಗ ಸಮಾನತೆ: ಆಸ್ತಿ ಹಂಚಿಕೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ತಾರತಮ್ಯವಿರಬಾರದು. ಎರಡೂ ಲಿಂಗಗಳಿಗೆ ಸಮಾನ ಹಕ್ಕುಗಳಿವೆ.
2005ರ ತಿದ್ದುಪಡಿ ಕಾಯಿದೆಗೆ ಮೊದಲು ನಿಧನರಾದವರಿಗೂ ಈ ಸಮಾನತೆಯ ನಿಯಮ ಅನ್ವಯವಾಗುತ್ತದೆ.
ತೀರ್ಪು ಸಂವಿಧಾನದ ಸಮಾನತೆಯ ತತ್ವಕ್ಕೆ ಆಧಾರಿತ…
ಈ ತೀರ್ಪು ಸಂವಿಧಾನದ ಸಮಾನತೆಯ ತತ್ವಕ್ಕೆ ಆಧಾರಿತವಾಗಿದೆ, ಇದು ಲಿಂಗ ಆಧಾರಿತ ತಾರತಮ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ.
ಮಹಿಳೆಯರ ಆಸ್ತಿ ಹಕ್ಕುಗಳನ್ನು ಬಲಪಡಿಸುವ ಒಂದು ಐತಿಹಾಸಿಕ ಹೆಜ್ಜೆ……
ಪಿತೃಪ್ರಧಾನ ಸಂಪ್ರದಾಯವನ್ನು ತಿರಸ್ಕರಿಸುವುದು.
ಈ ತೀರ್ಪು ಭಾರತದ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರ ಆಸ್ತಿ ಹಕ್ಕುಗಳನ್ನು ಬಲಪಡಿಸುವ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಹೆಣ್ಣುಮಕ್ಕಳನ್ನು ಆಸ್ತಿ ಹಂಚಿಕೆಯಿಂದ ಬಹಿಷ್ಕರಿಸುವ ಸಂಪ್ರದಾಯವು ಇನ್ನೂ ವ್ಯಾಪಕವಾಗಿದೆ. ಈ ತೀರ್ಪು ಈ ಸಂಪ್ರದಾಯವನ್ನು ಕಾನೂನಿನ ಮೂಲಕ ತಿರಸ್ಕರಿಸುವ ಒಂದು ಪ್ರಮುಖ ಕ್ರಮವಾಗಿದೆ. ಇದು ಕೇವಲ ಹಿಂದೂ ಉತ್ತರಾಧಿಕಾರ ಕಾಯಿದೆಗೆ ಸಂಬಂಧಿಸಿದ್ದಲ್ಲ, ಎಲ್ಲಾ ಧರ್ಮಗಳ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕುಗಳಿಗೆ ಕಾನೂನು ಆಧಾರವನ್ನು ಒದಗಿಸುತ್ತದೆ.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು, “ಕಾನೂನು ಮತ್ತು ನ್ಯಾಯವು ಸಮಾಜದ ಪ್ರಗತಿಗೆ ಸಾಧನವಾಗಬೇಕು” ಎಂಬ ಶಕ್ತಿಯುತ ಸಂದೇಶವನ್ನು ನೀಡಿದೆ. ಈ ತೀರ್ಪು ಕರ್ನಾಟಕದ ಗಡಿಗಳನ್ನು ಮೀರಿ, ಇಡೀ ಭಾರತದಲ್ಲಿ ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಮಹಿಳಾ ಸಬಲೀಕರಣಕ್ಕೆ ಒಂದು ದಿಟ್ಟ ಹೆಜ್ಜೆ
ಕರ್ನಾಟಕ ಹೈಕೋರ್ಟ್‌ನ ಈ ತೀರ್ಪು, ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು ದಿಟ್ಟ ಮತ್ತು ಪ್ರಗತಿಪರ ಕ್ರಮವಾಗಿದೆ. ಇದು ಲಿಂಗ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಕಾನೂನಿನ ಶಕ್ತಿಯನ್ನು ತೋರಿಸುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
