07/03/2026

Law Guide Kannada

Online Guide

ಪ್ರೊಸೆಸ್ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ: ಜಿಲ್ಲಾ ನ್ಯಾಯಾಧೀಶರ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಕಾರ್ಯಗತಗೊಳಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಪ್ರೋಸೆಸ್ ಸಿಬ್ಬಂದಿಗಳು ದಿನದ ಪ್ರಾರಂಭದಲ್ಲಿ ಹಾಗೂ ದಿನದ ಅಂತ್ಯಕ್ಕೆ ಎರಡು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಹಾಸನ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಈ ತಡೆ ನೀಡಿದೆ. ವಿವಿಧ ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯವು ಹೊರಡಿಸಿದ ಸಮನ್ಸ್, ನೋಟಿಸ್, ವಾರಂಟ್ ಮತ್ತಿತರ ಅದೇಶಿಕೆಗಳನ್ನು ನ್ಯಾಯಾಲಯವು ನಿಗದಿಪಡಿಸಿದ ದಿನಾಂಕದೊಳಗೆ ಜಾರಿಗೊಳಿಸುವ ಕರ್ತವ್ಯ ನಿರ್ವಹಿಸುತ್ತಿರುವ ಬೇಲೀಫ್ ಮತ್ತು ಪ್ರೋಸೆಸ್ ಸರ್ವರ್ ಗಳು ಪ್ರತಿದಿನ ಕಚೇರಿಗೆ ಹಾಜರಾದಾಗ ಮತ್ತು ಸಂಜೆ ಕಚೇರಿ ಅವಧಿ ಮುಗಿದ ಮೇಲೆ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಹಾಸನ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.

ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಈ ಆದೇಶದಿಂದ ಬಾಧಿತರಾದ ಹಾಸನ ಜಿಲ್ಲೆಯ ಬೇಲಿಫ್ ಮತ್ತು ಪ್ರೊಸೆಸ್ ಸರ್ವರ್ ಅವರು ತಮ್ಮ ಜಿಲ್ಲಾ ಸಂಘದ ವತಿಯಿಂದ ಕೇಂದ್ರ ಸಂಘಕ್ಕೆ ಮನವಿಯನ್ನು ನೀಡಿ ಸಾಯಂಕಾಲದ ಹಾಜರಾತಿಯಿಂದ ತಮಗೆ ವಿನಾಯಿತಿ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಆದರೆ ಆಡಳಿತಾತ್ಮಕ ಹಂತದಲ್ಲಿ ಈ ಸಮಸ್ಯೆಯನ್ನು ನಿವಾರಿಸುವುದು ಅಸಾಧ್ಯ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸಂಘ, ಜಿಲ್ಲಾ ಸಂಘ ಹಾಗೂ ಬಾಧಿತ ಪ್ರೋಸೆಸ್ ವಿಭಾಗದ ಸಿಬ್ಬಂದಿಯವರ ವತಿಯಿಂದ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 25328/2025 ದಾಖಲಿಸಲಾಯಿತು.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ರವರ ಕೇಂದ್ರ ಸಂಘ, ಬೆಂಗಳೂರು, ಜಿಲ್ಲಾ ಸಂಘ, ಹಾಸನ, ಪ್ರೊಸೆಸ್ ವಿಭಾಗದ ಸಿಬ್ಬಂದಿಗಳಾದ ರಾಮಾಚಾರಿ ಎನ್. ಎಚ್.ಎಸ್.ಮೋಹನ್ ಕುಮಾರ್, ಆರ್.ಕೆ.ಸುರೇಶ್ ಇವರು ಗಳು ರಿಟ್ ಪ್ರಕರಣದ ಅರ್ಜಿದಾರರಾಗಿದ್ದು, ರಿಟ್ ಅರ್ಜಿದಾರರು ಸಾಯಂಕಾಲದ ಬಯೋಮೆಟ್ರಿಕ್ ಹಾಜರಾತಿಯಿಂದ ತಮಗೆ ವಿನಾಯಿತಿ ನೀಡುವಂತೆ ಸೂಕ್ತ ನಿರ್ದೇಶನ ಹೊರಡಿಸಬೇಕೆಂದು ಮನವಿ ಮಾಡಿದರು.

ದಿನಾಂಕ 20.3.2025 ರಂದು ಹೈಕೋರ್ಟ್ ಎದುರುದಾರರ ಪೈಕಿ 1 ಮತ್ತು 2 ನೆಯವರ ಪರವಾಗಿ ನೋಟಿಸ್ ಸ್ವೀಕರಿಸಲು ಸ್ಥಾಯಿ ವಕೀಲರಲ್ಲಿ ಒಬ್ಬರಾದ ಡಿ.ವಿ. ವಿದ್ಯುಲ್ಲತಾ ಅವರಿಗೆ ನಿರ್ದೇಶನ ನೀಡಿತ್ತು. ಆ ನಿರ್ದೇಶನದ ಅನುಸಾರ ಅರ್ಜಿದಾರರು 20.8.2025 ರಂದು ಹೈಕೋರ್ಟ್ ಲೀಗಲ್ ಸೆಲ್ ಶಾಖೆಯ ಮೂಲಕ ಎದುರುದಾರರಿಗೆ ರಿಟ್ ಅರ್ಜಿಯ ಪ್ರತಿಯನ್ನು ನೀಡಿದ್ದು ಅದರ ಸ್ವೀಕೃತಿಯನ್ನು ಹಾಜರುಪಡಿಸಿದ್ದಾರೆ. ನೋಟಿಸು ನೀಡಿದರೂ ಎದುರುದಾರರು ಆ ವಿಷಯವನ್ನು ತಿಳಿಸಿದ ಸ್ಥಾಯಿ ವಕೀಲರಿಗೆ ಅಥವಾ ಇತರ ಯಾವುದೇ ವಕೀಲರಿಗೆ ಪ್ರಕರಣವನ್ನು ಹಸ್ತಾಂತರಿಸಿಲ್ಲ. ದಿನಾಂಕ 4.9.2025 ರಂದು ತಾತ್ಕಾಲಿಕ ಆದೇಶ ಪರಿಗಣನೆಗಾಗಿ ಪ್ರಕರಣವನ್ನು ಕರೆದಾಗಲೂ ಎದುರುವಾದಿ 1 ಮತ್ತು 2 ರ ಪರವಾಗಿ ಯಾರೂ ಹಾಜರಾಗಲಿಲ್ಲ. ಆದ್ದರಿಂದ ಮತ್ತೊಂದು ಅವಕಾಶ ನೀಡುವ ಸಲುವಾಗಿ ವಿಚಾರಣೆಯನ್ನು ದಿನಾಂಕ 10.09.2025ಕ್ಕೆ ಮುಂದೂಡಲಾಯಿತು.ಆದರೆ ದಿನಾಂಕ 10.09.2025 ರಂದು ಪ್ರಕರಣವನ್ನು ಕರೆದಾಗ ಎದುರುದಾರ 1 ಮತ್ತು 2 ರ ಪರವಾಗಿ ಯಾರೂ ಹಾಜರಾಗಲಿಲ್ಲ.

ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಲ್ಲಿ ಅನುಸರಿಸಲಾಗುತ್ತದೆಯೇ ಎಂಬುದನ್ನು ಎದುರುದಾರರಿಂದ ತಿಳಿದುಕೊಳ್ಳಲು ಈ ಮೊದಲು ಎರಡು ಬಾರಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಆದರೆ 1 ಮತ್ತು 2ನೇ ಎದುರುದಾರರ ಪರವಾಗಿ ಯಾರೂ ಹಾಜರಾಗದೆ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಪೀಠವು, ಪ್ರತಿದಿನ ಬೆಳಿಗೆ, ಮತ್ತು ಸಂಜೆ ಎರಡು ಬಾರಿ ಬಯೋಮೆಟ್ರಿಕ್ ಹಾಜರಾತಿ ನಿರ್ವಹಿಸಬೇಕೆಂದು ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದಿನಾಂಕ 16-6-2025 ರಂದು ಹೊರಡಿಸಿದ ಆದೇಶ (ಅನುಬಂಧ-ಬಿ) ಹಾಗೂ ದಿನಾಂಕ 21-7-2025 ರಂದು ಹೊರಡಿಸಿದ ಆದೇಶ (ಅನುಬಂಧ ಡಿ) ಗಳಿಗೆ ಮುಂದಿನ ವಿಚಾರಣಾ ದಿನಾಂಕದವರೆಗೆ ತಡೆ ನೀಡಿ ಆದೇಶ ಹೊರಡಿಸಿತು. ಇನ್ನು ರಿಟ್ ಅರ್ಜಿದಾರರ ಪರವಾಗಿ ಹೈಕೋರ್ಟಿನಲ್ಲಿ ವಕೀಲ ನಾರಾಯಣ ಭಟ್ ವಾದಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.