07/03/2026

Law Guide Kannada

Online Guide

ಅಪ್ಪ ಮಾಡಿದ್ದ ಸಾಲಕ್ಕೆ ಮಗನೂ ಹೊಣೆಯೇ..? ಹೈಕೋರ್ಟ್ ಕೊಟ್ಟ ತೀರ್ಪಿದು

ಬೆಂಗಳೂರು: ಅಪ್ಪ ಮಾಡಿದ್ದ ಸಾಲಕ್ಕೆ ಮಗ ಭದ್ರತೆಯಾಗಿ ಚೆಕ್ ನೀಡಿದ್ದರೆ ಆ ಸಾಲಕ್ಕೆ ಮಗನೂ ಹೊಣೆಯಾಗಿರುತ್ತಾನೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಪ್ರಸಾದ್ ರಾಯ್ಕರ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ತೀರ್ಪು ಪ್ರಕಟಿಸಿದೆ.

ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರನಾಗಿರುತ್ತಾನೆ. ಹಾಗೂ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಪ್ರಕಾರ ಮಗ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.

ಪ್ರಕರಣದ ವಿವರ…
ದಾವಣಗೆರೆಯ ಬಿ.ಟಿ. ದಿನೇಶ್ ಎಂಬವರು ತಮ್ಮ ಅಪ್ಪ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಭರವಸೆ ನೀಡಿದ್ದು, ಈ ಸಾಲದ ಪಾವತಿಯ ಖಾತ್ರಿಯಾಗಿ ಚೆಕ್ ಗಳನ್ನು ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿ ಪ್ರಸಾದ್ ರಾಯ್ಕರ್ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ದಾವಣಗೆರೆ ಜೆಎಂಎಫ್ಸಿ ನ್ಯಾಯಾಲಯ ಅಪ್ಪನ ಕಾನೂನು ಬದ್ಧ ವಾರಿಸುದಾರರಾದ ಮಗ ಸಾಲ ಮರುಪಾವತಿ ಮಾಡಬೇಕು ಎಂದು ತೀರ್ಪು ನೀಡಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಈ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು. ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೂರುದಾರ ಪ್ರಸಾದ್ ರಾಯ್ಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಚೆಕ್ ನೀಡಿದ ಬಳಿಕ ಕೇವಲ 10 ಸಾವಿರ ರೂ. ನೀಡಿದ್ದು, ಆ ಬಳಿಕ ತಮ್ಮ ತಂದೆ ಮಾಡಿದ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿರುವುದು ಸರಿಯಲ್ಲ. ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರ ಎಂದು ನ್ಯಾಯಪೀಠ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.