07/03/2026

Law Guide Kannada

Online Guide

ಉದ್ದೇಶಪೂರ್ವಕ ದೋಷಾರೋಪ ಪಟ್ಟಿ: ಅಧಿಕಾರಿಗಳ ಇಂತಹ ನಡೆ ಬಗ್ಗೆ ಎಚ್ಚರ ವಹಿಸಬೇಕಿದೆ- ಹೈಕೋರ್ಟ್ ತೀವ್ರ ಅಸಮಾಧಾನ

ಬೆಂಗಳೂರು: ‘ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ಉದ್ದೇಶಪೂರ್ವಕ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ ಅಧಿಕಾರಿಗಳ ಇಂತಹ ನಡೆ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಅನುಮತಿ ಪಡೆಯದೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರದ ಸಮೀಪ ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಬೈಕ್ ರ್ಯಾಲಿ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ತಮ್ಮ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅಧಿಕಾರಿಗಳ ಇಂತಹ ನಡೆಯ ಬಗ್ಗೆ ಎಚ್ಚರ ವಹಿಸಬೇಕಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಮತ್ತು ಆರೋಪಿಗಳು ನುಣುಚಿಕೊಳ್ಳಲು ಸಹಾಯವಾಗುವಂತಹ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಇದೆಲ್ಲಾ ಅವರಿಗೆ ಗೊತ್ತಿಲ್ಲ ಎಂದು ಹೇಳಲಾಗದು ಎಂದು ಕಟು ಟೀಕೆ ವ್ಯಕ್ತಪಡಿಸಿತು.

‘ಪ್ರಕರಣ ದಾಖಲಿಸಬೇಕು, ಅದು ವಿಫಲವಾಗಲಿ ಎಂಬುದು ಅಧಿಕಾರಿಗಳ ಧೋರಣೆಯಾಗಿರುತ್ತದೆ. ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳು ಭಾರತೀಯ ದಂಡ ಸಂಹಿತೆ-1860ರ ಕಲಂ 171 (ಎಚ್) ಅಪರಾಧಕ್ಕೆ ಅನ್ವಯಿಸುವುದಿಲ್ಲ. ಆದರೆ, ಐಪಿಸಿ ಕಲಂ 188ರ ಅಡಿ ಒಳಪಡುತ್ತವೆ. ಹೀಗಾಗಿ, ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ರಾಜ್ಯ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.