ಪತಿಯ ವಿಪರೀತ ಕುಡಿತದ ಚಟವೂ ‘ಕ್ರೌರ್ಯ: ಪತ್ನಿಗೆ ವಿಚ್ಚೇದನ, ಜೀವನಾಂಶಕ್ಕೆ ಹೈಕೋರ್ಟ್ ಆದೇಶ
ಛತ್ತೀಸ್ ಗಢ: ತನ್ನ ಕುಟುಂಬದ ಜವಾಬ್ದಾರಿಯನ್ನ ತೆಗೆದುಕೊಳ್ಳದೆ ಪತಿಯು ವಿಪರೀತ ಕುಡಿತದ ಚಟಕ್ಕೆ ದಾಸನಾದರೆ ಅದೂ ಕೂಡ ‘ಕ್ರೌರ್ಯ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ ಗಢದ ಹೈಕೋರ್ಟ್, ಪತ್ನಿಗೆ ವಿಚ್ಚೇದನ ನೀಡಿದ್ದು ಪತಿಯು ಜೀವನಾಂಶ ಪಾವತಿಸುವಂತೆ ಆದೇಶಿಸಿದೆ.
ವಿಚ್ಚೇದನ ಕೋರಿ ಪತ್ನಿ ಸಲ್ಲಿಸಿದ್ದ ಮನವಿ ಪುರಸ್ಕರಿಸಿರುವ ಛತ್ತೀಸ್ ಗಢದ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಗೌತಮ್ ಭಾಧುರಿ ಹಾಗೂ ಸಂಜಯ್ ಎಸ್ ಅಗರ್ವಾಲ್ ಅವರಿದ್ದ ವಿಭಾಗೀಯ ಪೀಠವು, ವಿಚ್ಚೇದನ ಮಂಜೂರು ಮಾಡಿ ಜೊತೆಗೆ ವಿಚ್ಛೇದಿತ ಪತ್ನಿಗೆ ಮಾಸಿಕ 15 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿದೆ.
ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸದೆ ವಿಪರೀತ ಕುಡಿತದ ಚಟಕ್ಕೆ ದಾಸನಾದ ಪತಿಯ ನಡವಳಿಕೆ ಕೂಡ ಹಿಂದೂ ವಿವಾಹ ಕಾಯ್ದೆಯ ಅಡಿ ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಡುತ್ತದೆ. ಅತಿಯಾದ ಮದ್ಯಪಾನ ಮಾಡುವ ಪತಿ ಮನೆಯ ಸ್ಥಿತಿಯನ್ನು ಹದಗೆಡಿಸುತ್ತಾನೆ. ಪತಿಯ ಈ ನಡವಳಿಕೆಯು ಸಹಜವಾಗಿಯೇ ಪತ್ನಿ ಹಾಗೂ ಮಕ್ಕಳನ್ನು ಹಿಂಸೆಗೊಳಪಡಿಸುತ್ತದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ದಾಂಪತ್ಯದಿಂದ ಮಕ್ಕಳು ಜನಿಸಿದಾಗ ಪತಿಯ ಹೊಣೆಗಾರಿಕೆ ಹೆಚ್ಚಾಗುತ್ತದೆ. ಅದರಲ್ಲೂ ಪತ್ನಿಯು ಗೃಹಿಣಿಯಾಗಿದ್ದರೆ ಪತಿಯು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ವಿವರ: ದಂಪತಿಗಳು 2006 ರಲ್ಲಿ ವಿವಾಹವಾಗಿದ್ದು, 13 ವರ್ಷದ ಮಗಳು ಹಾಗೂ 10 ವರ್ಷದ ಮಗನಿದ್ದಾರೆ. ಈ ಮಧ್ಯೆ ಪತಿ ಮದ್ಯ ವ್ಯಸನಿಯಾಗಿದ್ದು, ಪತಿಯ ವಿಪರೀತ ಮದ್ಯ ವ್ಯಸನಕ್ಕೆ ಬೇಸತ್ತ ಪತ್ನಿ ಮಾನಸಿಕ ಕ್ರೌರ್ಯದ ಅಡಿಯಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ, ಪತಿ ಕುಡಿತಕ್ಕೆ ದಾಸನಾಗಿದ್ದು ಮದ್ಯಪಾನಕ್ಕಾಗಿ ಮನೆಯ ವಸ್ತುಗಳನ್ನು ಮಾರಾಟ ಮಾಡಿದ್ದಾನೆ. ಮನೆ ಖರ್ಚಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಹಣ ನೀಡುತ್ತಿಲ್ಲ. ಪಾನಮತ್ತನಾಗಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಕ್ಕಳ ಜೊತೆ ತವರು ಮನೆಗೆ ಹೋಗುವಂತೆ ಬಲವಂತ ಮಾಡಿದ್ದಾನೆ, ಹೀಗಾಗಿ ವಿಚ್ಛೇದನ ಕೊಡಿಸಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಕೇವಲ ಮದ್ಯಪಾನದಿಂದ ಮಾನಸಿಕ ಕ್ರೌರ್ಯ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಮನವಿ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಛತ್ತೀಸ್ ಘಡದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಆಲಿಸಿದ ಹೈಕೋರ್ಟ್, ಪತಿಯ ಮದ್ಯ ವ್ಯಸನದಿಂದ ಮನನೊಂದು ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದಾಗ ಮದ್ಯಪಾನ ಬಿಡುವುದಾಗಿಯೂ ಹಾಗೂ ತನ್ನ ನಡವಳಿಕೆ ಸರಿಪಡಿಸಿಕೊಳ್ಳುವುದಾಗಿಯೂ ಹೇಳಿ ಅರ್ಜಿ ಹಿಂಪಡೆಯುವಂತೆ ಮಾಡಿದ್ದಾನೆ. ನಂತರವೂ ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ. ಎರಡನೇ ಬಾರಿ ಅರ್ಜಿ ಸಲ್ಲಿಸಿದಾಗ ವಿಚಾರಣೆಗೆ ಪತಿ ಹಾಜರಾಗಿಲ್ಲ. ಪತ್ನಿಯ ಆರೋಪಗಳನ್ನು ಪಾಟಿ ಸವಾಲಿಗೆ ಒಳಪಡಿಸಿಲ್ಲ. ಬದಲಿಗೆ ಪತ್ನಿಯಿಂದ ತನಗೂ ಬೆದರಿಕೆ ಇದೆಯೆಂದು, ತನ್ನ ಮೇಲೆ ಸಹ ಕೌರ್ಯ ನಡೆದಿದೆಯೆಂದು ತಿಳಿಸಿದ್ಧಾನೆ. ಪತ್ನಿಯ ಆರೋಪಗಳನ್ನು ಪಾಟಿಸವಾಲಿಗೆ ಒಳಪಡಿಸದೇ ಇರುವುದರಿಂದ ಆಕೆ ಮಾಡಿರುವ ಆರೋಪಗಳನ್ನು ನಿಜವಾಗಿ ಪರಿಗಣಿಸಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶಗಳು ಸಹ ಇದನ್ನು ಸ್ಪಷ್ಟಪಡಿಸುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ವಿಚ್ಚೇದನ ನೀಡಿ ಆದೇಶಿಸಿದೆ.
ಇದೇ ವೇಳೆ ಮಕ್ಕಳ ಶೈಕ್ಷಣಿಕ ವೆಚ್ಚ ಮತ್ತು ಪಾಲನೆ ಪೋಷಣೆಗಳನ್ನು ಪರಿಗಣಿಸಿ ಪತ್ನಿಗೆ ಮಾಸಿಕ 15,000 ನೀಡಬೇಕೆಂದು ಪತಿಗೆ ಹೈಕೋರ್ಟ್ ನ್ಯಾಯಪೀಠವು ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
