ಪೊಲೀಸ್ ವಿರುದ್ದ ಮೂರು ಮಕ್ಕಳ ತಾಯಿ ದಾಖಲಿಸಿದ್ದ ರೇಪ್ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ಮೂರು ಮಕ್ಕಳ ತಾಯಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನ ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ಆರೋಪಿ ವಿರುದ್ಧದ ದೋಷಾರೋಪ ಪಟ್ಟಿ ಹಾಗೂ ನಗರದ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ಫಕೀರಪ್ಪ ಹಟ್ಟಿ (30) ಎಂಬುವವರು ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಹೊರಡಿಸಿದೆ.
‘ದೂರುದಾರೆಯ ವೈವಾಹಿಕ ಸ್ಥಿತಿಗತಿಯು ಮದುವೆಯ ಭರವಸೆ ಕಲ್ಪನೆಯನ್ನು ಅಸಂಭವವಾಗಿಸಲಿದೆ. ಪ್ರತಿಯೊಂದು ಮುರಿದ ಭರವಸೆಯೂ ಸುಳ್ಳು ಭರವಸೆಯಲ್ಲ, ಪ್ರತಿಯೊಂದು ವಿಫಲ ಸಂಬಂಧವನ್ನು ಅತ್ಯಾಚಾರವೆಂದು ಅಪರಾಧೀಕರಿಸಲೂ ಆಗುವುದಿಲ್ಲ’ ಎಂದು ನ್ಯಾಯಪೀಠವು ಅಭಿಪ್ರಾಯಿಸಿದೆ. ಅತ್ಯಾಚಾರ ಮತ್ತು ಸಮ್ಮತಿಯ ಲೈಂಗಿಕ ಸಂಬಂಧ, ಮದುವೆಯ ಸುಳ್ಳು ಭರವಸೆ ಮತ್ತು ಮದುವೆಯ ಭರವಸೆ ನಡುವಿನ ಅಂತರ/ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಕೂಲಂಕುಷವಾಗಿ ವಿವರಿಸಿದೆ. ವಿವಾಹದ ಭರವಸೆಯ ಉಲ್ಲಂಘನೆ ಅದರಲ್ಲೂ ಇಬ್ಬರ ನಡುವಿನ ಸಂಬಂಧ ಸಮ್ಮತಿಯದ್ದಾಗಿದ್ದರೆ ಅದು ಅತ್ಯಾಚಾರ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂಬುದಾಗಿ ನ್ಯಾಯಾಲಯಗಳು ಸ್ಪಷ್ಟವಾಗಿ ತೀರ್ಪು ನೀಡಿವೆ ಎಂದು ನ್ಯಾಯಪೀಠವು ತಿಳಿಸಿದೆ.
ಆರೋಪಿಯ ಜೊತೆ 3 ವರ್ಷಗಳ ಕಾಲ ದೂರುದಾರೆ ಇದ್ದು, ನಿರಂತರ ಒಡನಾಟ ಹಾಗೂ ಪ್ರೀತಿಯ ಬಂಧ ಮತ್ತು ಒಪ್ಪಿಗೆಯ ಲೈಂಗಿಕ ಸಂಬಂಧ ಹೊಂದಿದ್ದನ್ನು ಪ್ರಕರಣದ ದಾಖಲೆಗಳೇ ಹೇಳುತ್ತವೆ. ಆರೋಪಿಯು ಮದುವೆಯ ಭರವಸೆ ಉಲ್ಲಂಘಿಸಿದ್ದಾರೆಂದು ದೂರುದಾರೆ ಆರೋಪಿಸುತ್ತಿದ್ದಾರೆ. ಆದರೆ, ಆಕೆ 2012ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದರು. ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ್ದಕ್ಕೆ ಪತಿಯನ್ನು ಬಿಟ್ಟು ಮಕ್ಕಳೊಂದಿಗೆ ದೂರುದಾರೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂಬ ಸಂಗತಿ ಇಲ್ಲಿ ಮರೆಯಬಾರದು ಎಂದು ನ್ಯಾಯಪೀಠ ತಿಳಿಸಿದೆ. ಹೈಕೋರ್ಟ್ ನ್ಯಾ, ಫಕೀರಪ್ಪ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.
ದೂರು ನೀಡಲು ಬಂದ ಮಹಿಳೆಯ ಜತೆಯೇ ಪೊಲೀಸ್ ಕಾನ್ಸ್ ಟೇಬಲ್ ಸಂಬಂಧ.
ಪ್ರಕರಣದ ದೂರುದಾರೆ ಮತ್ತು ಆಕೆ ನೆಲೆಸಿದ್ದ ಮನೆ ಮಾಲೀಕರ ಮಧ್ಯೆ ಮುಂಗಡವಾಗಿ ನೀಡಲಾಗಿದ್ದ ಭೋಗ್ಯದ ಹಣ ಹಿಂದಿರುಗಿಸುವ ವಿಚಾರವಾಗಿ 2019ರ ಅಕ್ಟೋಬರ್ ನಲ್ಲಿ ವಿವಾದ ಉಂಟಾಗಿತ್ತು. ಈ ಕುರಿತು ದೂರು ದಾಖಲಿಸಲು ಮಹಿಳೆ, ಮಹದೇವಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆ ವೇಳೆ ದೂರುದಾರೆಯ ಮೊಬೈಲ್ ನಂಬರ್ ಅನ್ನು ಫಕೀರಪ್ಪ ಪಡೆದುಕೊಂಡಿದ್ದರು.
ನಂತರ ಇಬ್ಬರ ನಡುವೆ ಸಂದೇಶಗಳು ವಿನಿಮಯಗೊಂಡು ಸಲುಗೆ ಬೆಳೆದು ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಅದು ಎರಡೂವರೆ ವರ್ಷ ಮುಂದುವರೆದಿತ್ತು. 2022ರ ಅ.15ರಂದು ಪೇದೆ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ ದೂರುದಾರೆ, ಫಕೀರಪ್ಪ ನನ್ನನ್ನು ಮದುವೆಯಾಗುತ್ತೇನೆಂದು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ಆರೋಪಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದ ತನಿಖೆ ನಡೆಸಿದ್ದ ಮಹದೇವಪುರ ಠಾಣಾ ಪೊಲೀಸರು, ‘ಫಕೀರಪ್ಪ ದೂರುದಾರೆಯನ್ನು ಪರಿಚಯಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಸಲುಗೆ ಬೆಳೆಸಿ, ಲೈಂಗಿಕ ದೌರ್ಜನ್ಯ ನಡೆಸಿರುವುದು ದೃಢಪಟ್ಟಿದೆ’ ಎಂದು ತಿಳಿಸಿದ್ದರು.
ಹಾಗೆಯೇ, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಸೆಕ್ಷನ್ 323 (ಮತ್ತೊಬ್ಬರಿಗೆ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ), ಸೆಕ್ಷನ್ 417 (ವಂಚನೆ) ಮತ್ತು 506 (ಜೀವ ಬೆದರಿಕೆ) ಅಪರಾಧದಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರ ರದ್ದತಿಗಾಗಿ ಫಕೀರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
