23/04/2026

Law Guide Kannada

Online Guide

ಸರ್ಕಾರಿ ನೌಕರರನ್ನು ಅಮಾನತು ಮಾಡಿದ್ರೆ ಜೀವನಾಂಶ ಭತ್ಯೆ ನಿರಾಕರಿಸಲು ಅವಕಾಶವಿಲ್ಲ – ಹೈಕೋರ್ಟ್

ಬೆಂಗಳೂರು: ಸರ್ಕಾರಿ ನೌಕರರ ಜೀವನಾಂಶ ಭತ್ಯೆ, ಅಮಾನತಿನ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವೊಂದನ್ನ ನೀಡಿದೆ.

‘ಸರಕಾರಿ ನೌಕರರನ್ನು ಸೇವೆಯಿಂದ ಅಮಾನತುಗೊಳಿಸಿದರೆ ಅವರ ಸೇವಾವಧಿಯಲ್ಲಿ ಲಭ್ಯವಾಗಬೇಕಿರುವ ಜೀವನಾಂಶ ಭತ್ಯೆ ನಿರಾಕರಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ತನ್ನನ್ನು ಅಮಾನತ್ತುಗೊಳಿಸಿದ್ದ ಕ್ರಮವನ್ನ ಪ್ರಶ್ನಿಸಿ ಬಸವರಾಜ ಪುಂಡಲೀಕಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠವು, ಅರ್ಜಿದಾರರನ್ನು ಅಮಾನತು ಮಾಡಿರುವ ಕ್ರಮ ವಿವೇಚನಾರಹಿತ ಮತ್ತು ಲೋಕಾಯುಕ್ತ ಆದೇಶದ ಅನ್ವಯ ಅವರನ್ನು ಅಮಾನತು ಮಾಡಿದ್ದು, ಅದರಲ್ಲಿ ಯಾವುದೇ ವಿವೇಚನೆ ಬಳಸಿಲ್ಲ,” ಎಂದು ಹೇಳಿದೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ”ಅರ್ಜಿದಾರರ ವಿರುದ್ಧದ ಅಮಾನತು ಆದೇಶವನ್ನು ರದ್ದುಗೊಳಿಸಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಅರ್ಜಿದಾರರನ್ನು ಅಗತ್ಯವಿರುವ ಹುದ್ದೆಗೆ ನೇಮಕ ಮಾಡಬಹುದಾಗಿದೆ,” ಎಂದು ತಿಳಿಸಿದೆ.

ಹಾಗೆಯೇ ‘ಅಧಿಕಾರಿಗಳನ್ನು ಅಮಾನತು ಮಾಡುವುದು ಶಿಕ್ಷೆಯಲ್ಲ. ಆದರೆ, ಸೂಕ್ತ ಕಾರಣವಿಲ್ಲದೆ ಮಾಡುವ ಅಮಾನತು ಶಿಕ್ಷೆಯಾಗಿ ಬದಲಾಗಲಿದೆ. ಅಲ್ಲದೆ, ದಂಡಕ್ಕಿಂತಲೂ ತೀವ್ರವಾಗಿರಲಿದೆ. ಜತೆಗೆ, ಉದ್ಯೋಗಿಯ ಭತ್ಯೆಗಳನ್ನು ನಿರಾಕರಿಸುವುದು ಆರ್ಥಿಕ ಮತ್ತು ವೃತ್ತಿಪರ ಬಹಿಷ್ಕಾರಕ್ಕೆ ಸಮಾನಧಿವಾಗಲಿದೆ” ಎಂದು ಅಭಿಪ್ರಾಯಿಸಿದೆ.

ಅರ್ಜಿದಾರ ಬಸವರಾಜ ಪುಂಡಲೀಕಪ್ಪ ಅವರು 1985ರಲ್ಲಿ ಬಾಗಲಕೋಟೆ ನಗರಸಭೆಯಲ್ಲಿಅಟೆಂಡರ್ ಆಗಿ ಸೇವೆಗೆ ಸೇರಿದ್ದರು. ಸುಮಾರು 41 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, 2015ರಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಲಂಚ ಸಂಬಂಧ ಲೋಕಾಯುಕ್ತ ಪೊಲೀಸರು ಬಸವರಾಜ ಪುಂಡಲೀಕ ಅವರನ್ನು ವಶಕ್ಕೆ ಪಡೆದುಕೊಂಡು, 96 ಗಂಟೆಗಳ ಕಾಲ ಇಟ್ಟುಕೊಂಡಿದ್ದರು. ಬಳಿಕ ಅವರಿಗೆ ಜಾಮೀನು ಲಭ್ಯವಾಗಿತ್ತು.

ಇನ್ನು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ”ಅರ್ಜಿದಾರರ ವಿರುದ್ಧ ಇಷ್ಟು ವರ್ಷಗಳಲ್ಲಿ ಯಾವುದೇ ಆರೋಪವಿಲ್ಲ. ನಿವೃತ್ತಿಗೆ ಐದು ತಿಂಗಳ ಬಾಕಿ ಇರುವ ಸಂದರ್ಭದಲ್ಲಿಅಮಾನತು ಮಾಡಲಾಗಿದೆ. ಇದರಿಂದ ಜೀವನಾಂಶ ಭತ್ಯೆ ಲಭ್ಯವಿಲ್ಲದಂತಾಗಿದೆ. ಪೊಲೀಸ್ ವಶದಲ್ಲಿದ್ದ ನಾಲ್ಕು ತಿಂಗಳ ಬಳಿಕ ಅವರ ವಿರುದ್ಧ ಆರೋಪ ಹೊರಿಸಿ ಸೇವೆಯಿಂದ ಅಮಾನತು ಮಾಡಲಾಗಿದ್ದು, ಸರಕಾರದ ನಿಯಮಗಳ ಪ್ರಕಾರ 48 ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದ ಪರಿಣಾಮ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹೇಳಿರುವುದು ಕಾನೂನುಬಾಹಿರ ಕ್ರಮವಾಗಿದೆ,” ಎಂದು ವಿವರಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.