23/04/2026

Law Guide Kannada

Online Guide

ಆರೋಪಿಗೆ ಸಮನ್ಸ್ ನೀಡುವಾಗ ಪೊಲೀಸರು ಪಾಲಿಸಬೇಕಾದ ನಿಯಮಗಳೇನು? ಸ್ಪಷ್ಟ ವಿವರ ಕೊಟ್ಟ ಹೈಕೋರ್ಟ್

ಬೆಂಗಳೂರು: ಆರೋಪಿಗೆ ಪೊಲೀಸರು ಸಮನ್ಸ್ ನೀಡುವಾಗ ಪಾಲಿಸಬೇಕಾದ ಕೆಲ ನಿಯಮಗಳ ಬಗ್ಗೆ ಹೈಕೋರ್ಟ್ ವಿವರ ನೀಡಿದ್ದು, ಸಮನ್ಸ್ ನೀಡುವಾಗ ಅಪರಾಧದ ಬಗ್ಗೆ ಮಾಹಿತಿ, ಎಫ್ಐಆರ್ ಸಂಖ್ಯೆ. ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದೆ.

“ಟಿ.ಆರ್.ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದಲ್ಲಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಟಿ.ವಿ. ಚಾನಲ್ ಸಿಇಒ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲಿಸರು ಪತ್ರಕರ್ತರಿಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ, ಠಾಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು.

ಈ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್. ಶಿವಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು, ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳಲು ನೀಡುವ ನೋಟಿಸ್ ನಲ್ಲಿ ಅಪರಾಧ ಕ್ರಮ ಸಂಖ್ಯೆ, ಪ್ರಥಮ ವರ್ತಮಾನ ಮಾಹಿತಿ (ಎಫ್ ಐಆರ್) ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್ ಲಿಸ್ಟ್ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ತಿಳಿಸಿದೆ.

ಎಫ್ಐಆರ್ ಸಂಖ್ಯೆ, ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಈ ಮೇಲೆ ತಿಳಿಸಿದ ಚೆಕ್ ಲಿಸ್ಟ್ ನೀಡದಿದ್ದರೆ ಆರೋಪಿಗಳು ಪೊಲೀಸ್ ಠಾಣೆಗೆ ಹಾಜರಾಗಬೇಕಿಲ್ಲ. ತೀರ್ಪಿನಲ್ಲಿ ನಿರ್ದೇಶಿಸಲಾದ ಅಂಶಗಳ ಕುರಿತು ಸಾರ್ವಜನಿಕರ ಅವಗಾಹನೆಗೆ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ನಿರ್ದೇಶಿಸಿದೆ.

ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ -2023 ಕಲಂ 35ರ ಅನುಸಾರ ಕಲಂ 35ರ ಅನುಸಾರ ಆರೋಪಿಗೆ ಚೆಕ್ ಲಿಸ್ಟ್ ಒದಗಿಸದಿದ್ದರೆ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ, ಹಾಗೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.