ವಕೀಲಿಕೆ ಮಾನದಂಡ ಪೂರೈಸದಿದದರೂ ಡಿಸ್ಟ್ರಿಕ್ಟ್ ಜಡ್ಜ್ ಆಗಿ ನೇಮಕ: ಹೈಕೋರ್ಟ್ ನೋಟಿಸ್
ಬೆಂಗಳೂರು: ವಕೀಲಿಕೆ ಮಾನದಂಡ ಪೂರೈಸದಿದ್ದರೂ ಜಿಲ್ಲಾ ನ್ಯಾಯಾಧೀಶರಾಗಿ ನೇಮಕರಾಗಿರುವದನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸಂಬಂಧ ರಿಜಿಸ್ಟ್ರಾರ್ ಗೆ ನೋಟಿಸ್ ಜಾರಿ ಮಾಡಿದೆ.
ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ಅಗತ್ಯವಾದ ನಿರಂತರವಾಗಿ ಏಳು ವರ್ಷ ವಕೀಲರಾಗಿ ಕರ್ತವ್ಯ ನಿರ್ವಹಿಸಿರಬೇಕು ಎನ್ನುವ ಮಾನದಂಡವಿದೆ. ಆದರೆ ಈ ಮಾನದಂಡವನ್ನು ಪೂರೈಸದೆ ಇದ್ದರೂ ಗೀತಾ ಶಿಂಧೆ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ವಕೀಲೆ ಚೇತನಾ ಪಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರ ವಿಭಾಗೀಯ ಪೀಠವು ಅರ್ಜಿ ಸಂಬಂಧ ರಿಜಿಸ್ಟ್ರಾರ್ ಜನರಲ್ ಗೆ ನೋಟಿಸ್ ಜಾರಿಗೊಳಿಸಿದೆ.
ನ್ಯಾ. ಗೀತಾ ಶಿಂಧೆ ಅವರ ನೇಮಕಾತಿ ಆದೇಶಕ್ಕೆ ತಡೆ ನೀಡಬೇಕು. ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ನ್ಯಾಯಾಧೀಶೆ ಗೀತಾ ಅವರಿಗೆ ಯಾವುದೇ ನ್ಯಾಯಾಂಗ ಕೆಲಸಗಳನ್ನು ಹಂಚಿಕೆ ಮಾಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಕ್ಕೆ ಅನುಗುಣವಾಗಿ ಏಳು ವರ್ಷ ಸತತವಾಗಿ ವಕೀಲರಾಗಿ ಪ್ರಾಕ್ಟೀಸ್ ಮಾಡಿರಬೇಕು ಎಂಬ ಮಾನದಂಡವನ್ನು ನ್ಯಾ. ಗೀತಾ ಅವರು ಪೂರೈಸಿಲ್ಲ. ಅದ್ದರಿಂದ ಅವರು ಜಿಲ್ಲಾ ನ್ಯಾಯಾಧೀಶೆಯ ಹುದ್ದೆಗೆ ಅರ್ಹರಾಗಿಲ್ಲ. ಸತ್ಯವನ್ನು ಮರೆಮಾಚುವ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಮತ್ತೊಬ್ಬ ಅಭ್ಯರ್ಥಿಯ ಅವಕಾಶವನ್ನು ಅವರು ಕಸಿದುಕೊಂಡಿದ್ದಾರೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
01.08.2019ರಿಂದ ಬೆಂಗಳೂರಿನ ಲಾ ವಿಂಗ್ಸ್ ಶೈಕ್ಷಣಿಕ ಟ್ರಸ್ಟ್ ಅಡಿ ಬರುವ ಬೆಂಗಳೂರು ಕಾನೂನು ಕಾಲೇಜಿನಲ್ಲಿ ಕಾನೂನು ವಿಭಾಗದಲ್ಲಿ ನ್ಯಾ. ಶಿಂಧೆ ಅವರು ಸಹಾಯಕ ಪ್ರಾಧ್ಯಾಪಕರಾಗಿದ್ದರು. ಮೊದಲಿಗೆ ಒಂದು ವರ್ಷ ಪೂರ್ಣಾವಧಿಗೆ ನೇಮಕವಾಗಿದ್ದು, ಆನಂತರ 2022 ರವರೆಗೆ ಅವರಿಗೆ ನಿರ್ದಿಷ್ಟ ವೇತನ ನಿಗದಿಪಡಿಸಿ ಸೇವೆ ವಿಸ್ತರಿಸಲಾಗಿತ್ತು. ಪೂರ್ಣಾವಧಿ ಉದ್ಯೋಗಿಯಾಗಿ ನ್ಯಾ. ಶಿಂಧೆ ಅವರು ವೇತನ ಸಹಿತ ರಜೆ ಸೇರಿ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಆಡಳಿತಾತ್ಮಕ ಕೆಲಸಗಳು, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಿಯಾಗಿರುವುದು, ಕಾಲೇಜು ಸಮಾರಂಭ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸಗಳಲ್ಲಿ ಭಾಗಿಯಾಗುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ ಕಾನೂನು ವಿಷಯದ ಪೂರ್ಣಾವಧಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ನ್ಯಾ. ಶಿಂಧೆ ಅವರು ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿಯಮಗಳನ್ನು ಉಲ್ಲಂಘಿಸಿ, ಬಿಸಿಐ ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಂಡಿದ್ದಾರೆ. ಈ ಅವಧಿಯನ್ನು ಪ್ರಾಕ್ಟೀಸ್ ಗೆ ಸೇರಿದ ಅವಧಿ ಎಂದು ಪರಿಗಣಿಸಲಾಗದು. 2019 ರಿಂದ 2022ರವರೆಗೆ ನ್ಯಾ.ಶಿಂಧೆ ಅವರು ವಕೀಲಿಕೆಯಿಂದ ಹೊರಗುಳಿದಿದ್ದರು ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಅದ್ದರಿಂದ 27.11.2024ರಂದು ಶಿಂಧೆ ಅವರ ನೇಮಕ ಮಾಡಿರುವ ಆದೇಶವನ್ನು ವಜಾಗೊಳಿಸಬೇಕು. ಖಾಲಿಯಾಗುವ ಹುದ್ದೆ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದರು.
ಇನ್ನು ಅರ್ಜಿದಾರರು ಎತ್ತಿರುವ ವಿಚಾರವನ್ನು ಪರಿಗಣಿಸಲಾಗಿದೆಯೇ ಎಂಬುದನ್ನು ನೋಡುವ ಇಚ್ಛೆ ಇದೆ” ಎಂದು ನ್ಯಾಯಪೀಠ ಹೇಳಿದ್ದು, ಅರ್ಜಿಯ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
