24/04/2026

Law Guide Kannada

Online Guide

ಕುಟುಂಬ ಪಿಂಚಣಿಗೆ ನಿರಾಕರಣೆ: ಸರ್ಕಾರದ ವಿರುದ್ದ ಕೇಸ್ ದಾಖಲಿಸಿ ಗೆದ್ದ ವಿವಾಹಿತ ಮಹಿಳೆ

ಚಂಡಿಗಢ: ದೈಹಿಕ ಅಂಗವಿಕಲತೆ ಹೊಂದಿದ್ದ ವಿವಾಹಿತ ಮಹಿಳೆಯೊಬ್ಬರು ತನ್ನ ತಂದೆಯ ಮರಣದ ನಂತರ ಕುಟುಂಬದ ಪಿಂಚಣಿ ನೀಡಲು ನಿರಾಕರಿಸಿದ ಸರ್ಕಾರದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿ ಕೇಸ್ ಗೆದ್ದಿದ್ದಾರೆ.

ತಾಯಿಯ ಮರಣದ ನಂತರ ಪಿಂಚಣಿ ಕೋರಿದ್ದ ಅವರಿಗೆ, ವಿವಾಹಿತಳಾದ ಕಾರಣ ಮತ್ತು ಪತಿಯ ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಂಡು ಸರ್ಕಾರ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿತ್ತು. ಆದರೆ ಇದನ್ನ ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದ ವಿವಾಹಿತ ಮಹಿಳೆಗೆ ಕೊನೆಗೂ ಜಯ ಸಿಕ್ಕಿದೆ.

ಸರ್ಕಾರದ ನಿರ್ಧಾರವನ್ನ ತಳ್ಳಿ ಹಾಕಿರುವ ಹೈಕೋರ್ಟ್ ಅಂಗವಿಕಲ ಮಗಳಿಗೆ ವಿವಾಹದ ಸ್ಥಿತಿ ಅಥವಾ ಪತಿಯ ಆದಾಯ ಪರಿಗಣಿಸದೆ ಪಿಂಚಣಿ ನೀಡಬೇಕೆಂದು ಆದೇಶಿಸಿದೆ. ತಂದೆಯ ಮರಣದ ನಂತರ ತಾಯಿ ಪಿಂಚಣಿ ಪಡೆಯುತ್ತಿದ್ದರು. ತಾಯಿಯ ಮರಣದ ಬಳಿಕ ವಿವಾಹಿತ ಮಗಳು ತನಗೆ ಕುಟುಂಬದ ಪಿಂಚಣಿ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಅವರು ವಿವಾಹಿತಳು ಮತ್ತು ಪತಿ ಸರ್ಕಾರಿ ನೌಕರನಾಗಿ ವಾರ್ಷಿಕ ₹4.22 ಲಕ್ಷ ಆದಾಯ ಹೊಂದಿರುವ ಕಾರಣ ಪಿಂಚಣಿಗೆ ಸರ್ಕಾರ ನಿರಾಕರಿಸಿತು.

ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (ಅಂಖಿ) ಕೂಡ ಸರ್ಕಾರದ ನಿಲುವನ್ನು ಬೆಂಬಲಿಸಿದ್ದು ಇದನ್ನು ಪ್ರಶ್ನಿಸಿ ವಿವಾಹಿತ ಮಹಿಳೆ ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪತಿ 100% ಅಂಗವಿಕಲನಾಗಿದ್ದು, ಮಗಳು ಸ್ವತಃ 70% ಅಂಗವಿಕಲತೆ ಹೊಂದಿದ್ದು ಯಾವುದೇ ಆದಾಯ ಮೂಲವಿಲ್ಲದ ಗೃಹಿಣಿಯಾಗಿದ್ದಾರೆ. ಪಂಜಾಬ್ ಸಿವಿಲ್ ಸರ್ವೀಸಸ್ ರೂಲ್ಸ್ ವಾಲ್ಯೂಮ್ II, ರೂಲ್ 6.17ರ ಪ್ರಕಾರ, ಅಂಗವಿಕಲತೆಯಿಂದ ಜೀವನೋಪಾಯ ಗಳಿಸಲು ಅಸಮರ್ಥ ಮಗಳು 25 ವರ್ಷ ಮೀರಿದರೂ, ವಿವಾಹಿತಳಾದರೂ ಪಿಂಚಣಿ ಪಡೆಯಲು ಅರ್ಹಳು. 2015ರ ಡಿಸೆಂಬರ್ 9ರ ಸೂಚನೆಯಂತೆ, ಅಂಗವಿಕಲ ಮಗಳ ಪತಿಯ ಆದಾಯವನ್ನು ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿತು.

ನಂತರ ಸರ್ಕಾರದ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಬಾಕಿ ಪಿಂಚಣಿಯನ್ನು 9% ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿ ₹25,000 ವೆಚ್ಚ ವಿಧಿಸಿತು.

ಸಾಮಾನ್ಯವಾಗಿ ವಿವಾಹಿತ ಮಗಳು 25 ವರ್ಷ ಮೀರಿದರೆ ಪಿಂಚಣಿ ಪಡೆಯಲು ಅರ್ಹಳಲ್ಲ. ಆದರೆ ದೈಹಿಕ ಅಥವಾ ಮಾನಸಿಕ ಅಂಗವಿಕಲತೆಯಿಂದ ಜೀವನೋಪಾಯ ಗಳಿಸಲು ಅಸಮರ್ಥರಾದಲ್ಲಿ ಜೀವಮಾನಕ್ಕೆ ಪಿಂಚಣಿ ಸಿಗುತ್ತದೆ, ವಿವಾಹದ ಸ್ಥಿತಿ ಪರಿಗಣಿಸದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.