ಜಾಮೀನು ಅರ್ಜಿ: ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್ ನಾಮ ಸಲ್ಲಿಕೆ ಕಡ್ಡಾಯವಲ್ಲ- ಹೈಕೋರ್ಟ್
ಅಲಹಾಬಾದ್: ಜಾಮೀನು ಅರ್ಜಿ ಸಲ್ಲಿಸುವ ವೇಳೆ ಹಿಂದಿನ ವಕೀಲರ ನಿರಪೇಕ್ಷಣೆ ಮತ್ತು ವಕಾಲತ್ ನಾಮ ಸಲ್ಲಿಕೆ ಮಾಡುವುದು ಕಡ್ಡಾಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ವರದಕ್ಷಿಣೆ ಸಾವು ಪ್ರಕರಣದಲ್ಲಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮನೋರಮಾ ಶುಕ್ಲಾ ಅವರಿಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಬ್ಬೇಶ್ ಕುಮಾರ್ ಚೌಧರಿ ಅವರಿದ್ದ ನ್ಯಾಯಪೀಠವು ದಂಡ ಪ್ರಕ್ರಿಯೆ ಸಂಹಿತೆಯ ಅಡಿಯಲ್ಲಿ ಆರೋಪಿ ಪರ ಜಾಮೀನು ಅರ್ಜಿ ಸಲ್ಲಿಸುವಾಗ ಈ ಹಿಂದೆ ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲರ ನಿರಪೇಕ್ಷಣೆ ಅಥವಾ ವಕಾಲತ್ ನಾಮ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನದ 22(1)ನೇ ವಿಧಿಯಡಿ ಮತ್ತು ದಂಡ ಪ್ರಕ್ರಿಯಾ ಸಂಹಿತೆಯ 303 ಮತ್ತು 41-ಆ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗೆ ತನ್ನ ಇಚ್ಚೆಯ ವಕೀಲರ ಮೂಲಕ ನ್ಯಾಯಾಲಯದಲ್ಲಿ ತನ್ನ ಪ್ರಕರಣವನ್ನು ಪ್ರತಿನಿಧಿಸುವುದು ಆತನ ಸಂವಿಧಾನಿಕ ಹಕ್ಕು. ನಿರಪೇಕ್ಷಣಾ ಪತ್ರ ಎನ್ನುವುದು ಒಂದು ಉತ್ತಮ ವೃತ್ತಿ ಹವ್ಯಾಸ. ಆದರೆ, ಅದು ಕಾನೂನು ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಜ್ಯೋತಿ ರಜಪೂತ್ ಎಂಬ ವಕೀಲರು ಎನ್ಜಿಓ ಪರವಾಗಿ ಅರ್ಜಿದಾರ ಮಹಿಳೆ ಪರವಾಗಿ ನ್ಯಾಯಪೀಠದ ಮುಂದೆ ಕಲಾಪದಲ್ಲಿ ಭಾಗವಹಿಸಿದ್ದರು. ಹಿಂದಿನ ವಕೀಲರು ನಿರಪೇಕ್ಷಣಾ ಪತ್ರ (ಎನ್ಓಸಿ)ಯನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.
ಈ ಸಂದರ್ಭದಲ್ಲಿ ನ್ಯಾಯಪೀಠ ಪ್ರಮುಖ ಮಾರ್ಗಸೂಚಿಯನ್ನು ಹೊರಡಿಸಿತು. ರೆಗ್ಯೂಲರ್ ಜಾಮೀನು, ನಿರೀಕ್ಷಣಾ ಜಾಮೀನು ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಕಾಲತ್ ನಾಮ ಸಲ್ಲಿಸುವುದು ಕಡ್ಡಾಯವಲ್ಲ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
