06/03/2026

Law Guide Kannada

Online Guide

ನೋಟ್ ಡಿಮೊನೆಟೈಸೇಶನ್ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆ ನೋಟನ್ನು ಹೊಸ ಕರೆನ್ಸಿಗೆ ಬದಲಾಯಿಸಲು ಸಾಧ್ಯವೇ..?

ಬಾಂಬೆ: ನೋಟು ಅಮಾನ್ಯಕರಣ (ಡಿಮೊನೆಟೈಸೇಷನ್) ಗಿಂತ ಮೊದಲು ಪೊಲೀಸ್ ಕಸ್ಟಡಿಯಲ್ಲಿ ಇದ್ದ ಕರೆನ್ಸಿ ನೋಟುಗಳನ್ನು ಕೆಲ ಷರತ್ತುಗೊಳಪ್ಪಟ್ಟು ಪ್ರಸ್ತುತ ಚಲಾವಣೆಯಲ್ಲಿರುವ ಮಾನ್ಯ ಕರೆನ್ಸಿಯಿಂದ ಬದಲಾಯಿಸಲು ಆರ್ ಬಿಐಗೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿತು.

ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಜಿ.ಎಸ್. ಪಟೇಲ್ ಹಾಗೂ ಮಧವ್ ಜೆ. ಜಮ್ಮಾರ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ನೋಟು ಅಮಾನ್ಯಕರಣ ಮೊದಲು ಇದ್ದ ಕರೆನ್ಸಿ ನೋಟುಗಳು ಮತ್ತು ಅವುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ಮಾನ್ಯ ಕರೆನ್ಸಿಯಿಂದ ಬದಲಾಯಿಸುವ ಕುರಿತು ಕಿಶೋರ್ ರಮೇಶ್ ಸಹೋನಿ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿತು.

ಭಾರತೀಯ ದಂಡ ಸಂಹಿತೆ, 1860ರ ಸೆಕ್ಷನ್ ಗಳು 420, 504 ಮತ್ತು 506 ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಆರೋಪಿಗೆ ₹1,60,000ನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲು ನಿರ್ದೇಶಿಸಿದ್ದರು ಮತ್ತು ಆ ಮೊತ್ತವನ್ನು ನಗದಾಗಿ ಠೇವಣಿ ಮಾಡಲಾಗಿತ್ತು.

ಅರ್ಜಿದಾರರು ಹಾಗೂ ಒಬ್ಬ ಸಾಕ್ಷಿಗೆ ಮೇಲ್ಕಂಡ ಮೊತ್ತವನ್ನು ಪೊಲೀಸ್ ಠಾಣೆಯಿಂದ ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು, ಅರ್ಜಿದಾರರಿಗೆ ₹60,000 ಮತ್ತು ಸಾಕ್ಷಿಗೆ ₹1,00,000 ದೊರೆಯಬೇಕಾಗಿತ್ತು. ಭಾರತ ಸರ್ಕಾರದ 8-1-2016ರ ಅಧಿಸೂಚನೆಯ ಮೂಲಕ ಕೆಲವು ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿದ್ದು ಈ ವೇಳೆ ಅರ್ಜಿದಾರರು, ತಮ್ಮ ನಗದು ಅಧಿಕಾರಿಯ ವಶದಲ್ಲಿದ್ದ ಕಾರಣ ಅದು ಡಿಮೊನೆಟೈಸೇಶನ್ನಿಂದ ರಕ್ಷಿತವಾಗಿದೆ ಎಂದು ನಂಬಿದ್ದರು.

ಮುಂದುವರೆದು, ಅರ್ಜಿದಾರರು ತಮ್ಮ ಹಣವನ್ನು ಮರಳಿ ಪಡೆಯಲು ಪೊಲೀಸ್ ಠಾಣೆಗೆ ಹೋದಾಗ, ಅವರಿಗೆ ಹಳೆಯ ಕರೆನ್ಸಿ ನೋಟುಗಳನ್ನು ಅರ್ಜಿದಾರರಿಗೆ ನೀಡಲಾಗತ್ತು. ಆ ವೇಳೆಗೆ ಅವೆಲ್ಲವೂ ಅಮಾನ್ಯಗೊಂಡಿದ್ದು, ಅರ್ಜಿಯಲ್ಲಿ ಅವರು ಹೇಳಿರುವಂತೆ “ಮಹಾತ್ಮಾ ಗಾಂಧಿಯವರ ಚಿತ್ರವಿರುವ ಕೇವಲ ಕಾಗದದ ತುಂಡುಗಳಾಗಿತ್ತು.

ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆಯ ಕರೆನ್ಸಿ ನೋಟುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ಕರೆನ್ಸಿಯಿಂದ ಬದಲಾಯಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಭಾರತ ಸಂವಿಧಾನದ ಕಲಂ 226 ಅಡಿಯಲ್ಲಿ ಸಮನ್ವಯಾತ್ಮಕ ವಿವೇಚನಾ ಅಧಿಕಾರವನ್ನು ಬಳಸಿಕೊಂಡು ಸರಣಿ ಸಂಖ್ಯೆಗಳ ಉಲ್ಲೇಖ ಸೇರಿದಂತೆ ಇತರ ಅವಶ್ಯಕತೆಗಳನ್ನು ಪೂರೈಸುವ ಷರತ್ತಿನ ಮೇಲೆ, ಅರ್ಜಿದಾರರು ಸಲ್ಲಿಸಿದ ಕರೆನ್ಸಿಯನ್ನು ಪ್ರಸ್ತುತ ಚಲಾವಣೆಯಲ್ಲಿರುವ ಕರೆನ್ಸಿಯಿಂದ ಬದಲಾಯಿಸುವಂತೆ ಆರ್ಬಿಐಗೆ ನಿರ್ದೇಶನ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.