06/03/2026

Law Guide Kannada

Online Guide

ಹಿಂದೂ ಉತ್ತರಾಧಿಕಾರ ಕಾಯಿದೆ: ಇರುವ ಗೊಂದಲ ನಿವಾರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಹಿಂದೂ ಉತ್ತರಾಧಿಕಾರ ಕಾಯಿದೆಗೆ 2005ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಗೊಂದಲವಿದೆ. ವಿಧವೆ ಮತ್ತು ತಾಯಿಯ ಹಕ್ಕುಗಳನ್ನು ರಕ್ಷಿಸುವ ಸಂಬಂಧ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಬೇಕಾದ ಅಗತ್ಯತೆ ಇದೆ. ಹೀಗಾಗಿ ಗೊಂದಲವನ್ನು ನಿವಾರಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಪಿತ್ರಾರ್ಜಿತ ಆಸ್ತಿ ಕುರಿತು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹಿರೇಕೊಪ್ಪದ ಶರಣವ್ವ ಮತ್ತಿತರರು ಸಲ್ಲಿಸಿದ್ದ ಅರ್ಜಿ ಪ್ರಕರಣ ಇದಾಗಿದೆ. ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಹೈಕೋರ್ಟ್ ಗೆ ಈ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿಗಳಾದ ಆರ್. ದೇವದಾಸ್ ಮತ್ತು ಬಿ ಮುರಳೀಧರ್ ಪೈ ಅವರಿದ್ದ ವಿಭಾಗೀಯ ಪೀಠವು, ಹಿಂದೂ ಉತ್ತರಾಧಿಕಾರ ಕಾಯಿದೆಗೆ 2005ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ವಿಧವಾ ಪತ್ನಿ ಮತ್ತು ತಾಯಿಯ ಹಕ್ಕುಗಳ ಸಂಬಂಧ ಕೆಲ ಗೊಂದಲಗಳಿದೆ. ಅದಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣದ ವಿವರ
2008ರಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಪ್ರಕರಣ ಇದಾಗಿದೆ. ಸಾವನ್ನಪ್ಪಿದ ವ್ಯಕ್ತಿಯ ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಹಾಗೂ ಮೊದಲ ಪತ್ನಿ (ಸಂತಾನವಿಲ್ಲ) ಆಸ್ತಿ ವಿಭಾಗ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2021ರ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡನೇ ಪತ್ನಿಯ ಮಕ್ಕಳು ತಮ್ಮ ತಂದೆಯ ಮೊದಲ ಪತ್ನಿಯ ಮದುವೆಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಅಕ್ರಮವೆಂದಿದ್ದರು. ಅತ್ತ ಮೊದಲ ಪತ್ನಿಯ ಪರ ವಕೀಲರು ಪತಿಯ ಎರಡನೇ ವಿವಾಹವು ಕಾನೂನುಬಾಹಿರವಾಗಿದ್ದು, ಅಕೆಯಿಂದ ಪಡೆದ ಮಕ್ಕಳು ಕಾನೂನುರೀತ್ಯ ಆಸ್ತಿ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿ, ಪ್ರಕರಣದ ಎಲ್ಲಾ ಅಂಶಗಳನ್ನು ಅವಲೋಕಿಸಿದ ನ್ಯಾಯಪೀಠವು, ಕಾಯಿದೆಯಲ್ಲಿನ ಗೊಂದಲಕಾರಿ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ವಿಧವೆ ಮತ್ತು ತಾಯಿಯ ಹಕ್ಕುಗಳನ್ನು ರಕ್ಷಿಸುವ ಸಂಬಂಧ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಬೇಕಾದ ಅಗತ್ಯತೆ ಇದೆ. ವರ್ಗ-1ರಲ್ಲಿ ವಿಧವಾ ಪತ್ನಿ, ತಾಯಿ, ಪುತ್ರನ ವಿಧವಾ ಪತ್ನಿ ಇತ್ಯಾದಿಗೆ ಸಂಬಂಧಿಸಿದ ವಿಷಯಗಳನ್ನು ಅಚಾತುರ್ಯದಿಂದ ತಿದ್ದುಪಡಿ ಸೆಕ್ಷನ್ 6ರಲ್ಲಿ ಕೈಬಿಡಲಾಗಿದೆ. ಸಾಮಾನ್ಯವಾಗಿ ತಿದ್ದುಪಡಿಯಾಗಿರುವ ಸೆಕ್ಷನ್ 6 ಓದಿದರೆ ವರ್ಗ-1ರ ಉಲ್ಲೇಖವಿಲ್ಲ. ಷೆಡ್ಯೂಲ್ನ ವರ್ಗ-1ಕ್ಕೆ ಅದನ್ನು ಸೇರ್ಪಡೆ ಮಾಡಿ ತಿದ್ದುಪಡಿ ಮಾಡುವುದು ಗೊಂದಲ ನಿವಾರಿಸುವ ದೃಷ್ಟಿಯಿಂದ ಅಗತ್ಯವಾಗಿದೆ,” ಎಂದು ನ್ಯಾಯಪೀಠ ತಿಳಿಸಿದೆ. ಆದೇಶದ ಪ್ರತಿಯನ್ನು ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿಕೊಡಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ಕ್ಕೆ ತಂದಿರುವ ಜಂಟಿಯಾಗಿರುವ ಪಿತ್ರಾರ್ಜಿತ ಆಸ್ತಿಯ ವಿಭಜನೆ ಕುರಿತ ವಿಚಾರದಲ್ಲಿ ವಿಧವೆ ಮತ್ತು ಆಕೆಯ ಅತ್ತೆಯ (ಪತಿಯ ತಾಯಿ) ಕುರಿತು ಕೆಲವು ಗೊಂದಲಗಳಿರುವುದನ್ನು ಈ ಸಂದರ್ಭದಲ್ಲಿ ಸಂಬಂಧಿತರ ಗಮನಕ್ಕೆ ತರುವುದು ನಮ್ಮ ಕರ್ತವ್ಯವಾಗಿದೆ. ಸೆಕ್ಷನ್ 6ರಲ್ಲಿ ವಿಧವಾ ಪತ್ನಿ ಮತ್ತು ತಾಯಿಯ ಬಗ್ಗೆ ಉಲ್ಲೇಖವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.