06/03/2026

Law Guide Kannada

Online Guide

ಕೆನರಾ ಬ್ಯಾಂಕ್ ಗೆ ಬರೊಬ್ಬರಿ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್: ಕಾರಣವೇನು..?

ಬೆಂಗಳೂರು,ಫೆಬ್ರವರಿ,23,2026 (www.justkannada.in): ಸಾಲ ತೀರಿಸಿದ ನಂತರವೂ ಆಸ್ತಿ ದಾಖಲೆಯನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದ ಕೆನರಾ ಬ್ಯಾಂಕ್ ಗೆ ಕರ್ನಾಟಕ ಹೈಕೋರ್ಟ್ ಬರೋಬ್ಬರಿ 2 ಲಕ್ಷ ರೂ. ದಂಡ ವಿಧಿಸಿ ಎಚ್ಚರಿಕೆ ರವಾನಿಸಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು ಈ ಮೂಲಕ ಗ್ರಾಹಕರನ್ನು ಸತಾಯಿಸುವ ಹಣಕಾಸು ಸಂಸ್ಥೆಗಳಿಗೆ ಖಡಕ್ ವಾರ್ನಿಂಗ್ ನೀಡಿದೆ.

ಮಗ ಮೃತಪಟ್ಟ ಬಳಿಕ 85 ವರ್ಷದ ವೃದ್ಧ ಸೋಮಶೇಖರ್ ಗೌಡ ಎಂಬುವವರು ತಾವೇ ಖುದ್ದಾಗಿ ಮಗನ ಸಾಲ ತೀರಿಸಿದ ನಂತರವೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಹಿಂದಿರುಗಿಸಲು ಕೆನರಾ ಬ್ಯಾಂಕ್ ಮೀನಮೇಷ ಎಣಿಸಿತ್ತು. ಈ ಬಗ್ಗೆ ಧಾವಣಗೆರೆಯ ಎಂಬಿ ಆಕ್ರೋಫುಡ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಎಂ.ಬಿ. ಸೋಮಶೇಖರ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣದ ವಿವರ..
ದಾವಣಗೆರೆಯ ಎಂಬೀ ಕ್ರೋಫುಡ್ ಇಂಡಸ್ಟ್ರೀಸ್ ನ ಮಾಲೀಕ ಅನಿಮೇಶ್ ಅವರು ಕೆನರಾ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಸಾಲ ತೀರಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಬ್ಯಾಂಕ್ ಸಂಸ್ಥೆಯ ವಾರಸುದಾರರಾದ ಸೋಮಶೇಖರ್ ಗೌಡ ಅವರಿಗೆ ಸಾಲ ತೀರಿಸಲು 19.7 ಕೋಟಿ ರೂಪಾಯಿಗಳ OTS ಪ್ರಸ್ತಾಪ ನೀಡಿತು.
ಅದರಂತೆ ಸಾಲ ತೀರಿಸಿದ್ದರೂ ದಾವಣಗೆರೆಯಲ್ಲಿ ಒತ್ತೆ ಇಟ್ಟಿರುವ ಮನೆ ಮತ್ತು ಜಮೀನಿನ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಸತಾಯಿಸುತ್ತಿತ್ತು. ದಾಖಲೆಗಳನ್ನು ಹಿಂದಿರುಗಿಸುವಂತೆ ಬ್ಯಾಂಕ್ ಗೆ ಹೈಕೋರ್ಟ್ ನಿರ್ದೇಶನ ನೀಡಿದಾಗ, ಸೋಮಶೇಖರ್ ಗೌಡ ಅವರು ಮೂಲ ಸಾಲಗಾರರಲ್ಲದ ಕಾರಣ ದಾಖಲೆಗಳನ್ನು ನೀಡಿಲ್ಲ ಎಂದು ಬ್ಯಾಂಕ್ ವಾದಿಸಿತ್ತು.

ಸೋಮಶೇಖರ್ ಗೌಡ ಅವರ ಪುತ್ರ ಸಾಲ ತೀರಿಸದೆ ಮೃತಪಟ್ಟಿದ್ದಾರೆ. ಈ ವೇಳೆ ಸಂಸ್ಥೆಯ ಕಾನೂನಾತ್ಮಕ ವಾರಸುದಾರರಾದ ಸೋಮಶೇಖರ್ ಗೌಡರು ಸ್ವಯಂಪ್ರೇರಣೆಯಿಂದ ಒನ್-ಟೈಮ್ ಸೆಟಲ್ಮಂಟ್ OTS ಅಡಿಯಲ್ಲಿ ಸುಮಾರು 19 ಕೋಟಿ ರೂಪಾಯಿಗೂ ಹೆಚ್ಚು ಸಾಲ ತೀರಿಸಿದ್ದಾರೆ. ಸಾಲ ವಾಪಸ್ಸು ಮಾಡಿದ ನಂತರವೂ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಬ್ಯಾಂಕ್ ಮುಂದೂಡುತ್ತಾ ಬಂದಿರುವುದು ವಿಪರ್ಯಾಸ ಮತ್ತು ವಿಚಿತ್ರ ಎಂದು ಬ್ಯಾಂಕ್ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೇ, ಮಗ ಸಾಲ ತೀರಿಸದೆ ಮೃತಪಟ್ಟ ಬಳಿಕ ತಂದೆ ಸಾಲ ತೀರಿಸುವ ಕುರಿತು ಬ್ಯಾಂಕ್ ನೊಂದಿಗೆ ಮಾತುಕತೆ ನಡೆಸಿದ್ದಾರೆ. ಸಾಲದ ಜೊತೆಗೆ 5 ಲಕ್ಷ ಕಾನೂನು ವೆಚ್ಚವನ್ನೂ ಪಾವತಿಸಿದ್ದಾರೆ. ಹೀಗಾಗಿ ಬ್ಯಾಂಕ್ ಗೆ ಮಗ ಅರ್ಥಾತ್ ಮೂಲ ಸಾಲಗಾರ ಇನ್ನಿಲ್ಲ ಎಂಬುದು ತಿಳಿದಿದೆ. ಹಾಗಿದ್ದೂ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಮೀನಮೇಷ ಎಣಿಸುವುದು ಮತ್ತು ಸಾಲ ತೀರಿಸಿರುವ ವ್ಯಕ್ತಿ ಮೂಲ ಸಾಲಗಾರನಲ್ಲ ಎಂಬ ನೆಪ ಮುಂದಿಡುವುದು ಸಮಂಜಸವಲ್ಲ. ಇದು ಖಾಸಗಿ ಲೇವಾದೇವಿದಾರರ ಕ್ರೂರ ನಡವಳಿಕೆಗೆ ಸಮನಾಗಿದೆ ಎಂದು ನ್ಯಾಯಪೀಠ ಛೀಮಾರಿ ಹಾಕಿತು.

ಇದೇ ವೇಳೆ ಕೆನರಾ ಬ್ಯಾಂಕ್ ಗೆ 2 ಲಕ್ಷ ದಂಡ ವಿಧಿಸಿರುವ ನ್ಯಾಯಪೀಠವು ದಂಡದ ಮೊತ್ತ ಹಾಗೂ ಆಸ್ತಿಯ ಮೂಲ ದಾಖಲೆಗಳನ್ನು ಕೂಡಲೇ ಅರ್ಜಿದಾರರಿಗೆ ಹಿಂದಿರುಗಿಸುವಂತೆ ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.