05/03/2026

Law Guide Kannada

Online Guide

ಲಿಂಗಾಯತ ಗಾಣಿಗ ಸಮುದಾಯಕ್ಕೆ ‘2ಎ’ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ವ್ಯಕ್ತಿಯು ಲಿಂಗಾಯತ ಧರ್ಮವನ್ನು ಅನುಸರಿಸುತ್ತಿದ್ದರೂ ಗಾಣಿಗ ಜಾತಿಗೆ ಸೇರಿದವನಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಪ್ರವರ್ಗ 2ಎ ಅಡಿ ಜಾತಿ ಪ್ರಮಾಣ ಪತ್ರವನ್ನು ನೀಡಿದ ಕ್ರಮವನ್ನು ಸಮರ್ಥಿಸಿದೆ. ಈ ಮೂಲಕ ಲಿಂಗಾಯತ ಗಾಣಿಗ ಸಮುದಾಯಕ್ಕೆ 2 ‘ಎ’ ಸಿಂಧುತ್ವ ನೀಡಿರುವುದನ್ನು ಎತ್ತಿಹಿಡಿದಿದೆ.
ಪೊಲೀಸ್ ಸಬ್-ಇನ್ಸ್ಪೆಕ್ಟರ್ ಒಬ್ಬರು ಸುಳ್ಳು ಗಾಣಿಗ – ಲಿಂಗಾಯತ ಜಾತಿ ಮಾನ್ಯತೆ ಪ್ರಮಾಣಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಾನ್ ಸ್ಟೆಬಲ್ ಜಗದೀಶ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಅಲ್ಲದೆ ಲಿಂಗಾಯತ’ ಮತ್ತು ‘ಗಾಣಿಗ’ ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ. ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಗಾಣಿಗ ಒಂದು ವಿಶಿಷ್ಟ ಜಾತಿ ಗುಂಪಾಗಿ ಅಸ್ತಿತ್ವದಲ್ಲಿರಬಹುದು ಎಂದು ಆದೇಶಿಸಿದೆ.

ಪೂರ್ವಜರ ದಾಖಲೆಗಳಲ್ಲಿ’ಲಿಂಗಾಯತ’ ಎಂದು ವಿವರಿಸಲಾದ ವ್ಯಕ್ತಿಯು ಪುರಾವೆಗಳ ಆಧಾರದ ಮೇಲೆ ಆ ಗುಂಪಿನೊಳಗೆ ಗಾಣಿಗ ಗುರುತನ್ನು ಸ್ಥಾಪಿಸಬಹುದು ಎಂದು ನ್ಯಾಯಪೀಠ ಆದೇಶಿಸಿದೆ.

ಲಿಂಗಾಯತ ಧಾರ್ಮಿಕ ಸಮುದಾಯ ಮತ್ತು ಗಾಣಿಗ- ಇದು ವಿಭಿನ್ನ ವೃತ್ತಿ ಆಧಾರಿತ ಜಾತಿ. ಇವು ಪರಸ್ಪರ ವಿರುದ್ಧ ಗುರುತುಗಳಲ್ಲ. ಅಂದರೆ, ವ್ಯಕ್ತಿಯು ಲಿಂಗಾಯತ ಸಮುದಾಯದ ಧರ್ಮವನ್ನು ಅನುಸರಿಸುತ್ತಿದ್ದರೂ, ವಿಶಾಲ ಸಮುದಾಯದ ಒಳಹೊರೆಯಲ್ಲಿ ಗಾಣಿಗ ಜಾತಿಗೆ ಸೇರಿರಬಹುದು ಎಂಬುದನ್ನು ನ್ಯಾಯಪೀಠ ಗಮನಿಸಿತು.

ಕಾನೂನಿನ ಪ್ರಕಾರ “ಲಿಂಗಾಯತ” ಎಂಬ ಧಾರ್ಮಿಕ ಸಮುದಾಯ ಮತ್ತು “ಗಾಣಿಗ” ಅಂದರೆ ಎಣ್ಣೆ ತೆಗೆಯುವವರು ಪರಸ್ಪರ ವಿರುದ್ಧ ಗುರುತುಗಳೇ ಅಥವಾ ಗಾಣಿಗರು ವಿಶಾಲ ಲಿಂಗಾಯತ ವಲಯದೊಳಗಿನ ವಿಭಿನ್ನ ಜಾತಿ ಗುಂಪಾಗಿ ಮುಂದುವರಿಯಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಪೀಠ ಪರಿಗಣಿಸುತ್ತಿತ್ತು.

ಈ ಪ್ರಶ್ನೆಗೆ ಸಂಬಂಧಿಸಿದ ಪೂರ್ವ ನಿದರ್ಶನಗಳನ್ನು ಪರಿಶೀಲಿಸಿದ ನಂತರ, “ಲಿಂಗಾಯತ ಮತ್ತು ಗಾಣಿಗ ಪರಸ್ಪರ ವಿರುದ್ಧ ಗುರುತುಗಳಲ್ಲ: ಗಾಣಿಗವು ವಿಭಿನ್ನ ವೃತ್ತಿ ಆಧಾರಿತ ಜಾತಿಯಾಗಿದ್ದು, ವಿಶಾಲ ಲಿಂಗಾಯತ/ವೀರಶೈವ ವಲಯದೊಳಗೆ ಮುಂದುವರಿಯಬಹುದು; ವ್ಯಕ್ತಿಯು ಧಾರ್ಮಿಕವಾಗಿ ಲಿಂಗಾಯತವಾಗಿದ್ದು ಜಾತಿ ವರ್ಗೀಕರಣದಲ್ಲಿ ಗಾಣಿಗನಾಗಿರಬಹುದು; ಶಾಲಾ ದಾಖಲೆಗಳಲ್ಲಿ ‘ಹಿಂದು ಲಿಂಗಾಯತ’ ಎಂಬ ವಿವರಣೆ ಮಾತ್ರದಿಂದ ಗಾಣಿಗ ಗುರುತನ್ನು ನಿರಾಕರಿಸಲಾಗುವುದಿಲ್ಲ ಎಂಬುದಾಗಿ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

”ಲಿಂಗಾಯತ ಮತ್ತು ಗಾಣಿಗರು ಪರಸ್ಪರ ಪ್ರತ್ಯೇಕವಾಗಿಲ್ಲ. ವಿಶಾಲವಾದ ಲಿಂಗಾಯತ ಪಂಗಡ ಅಸ್ತಿತ್ವದಲ್ಲಿರುವಾಗ ತಮ್ಮ ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ-ಪಂಗಡಗಳನ್ನು ಸೇರಿಸುವ ಮೂಲಕ ಲಿಂಗಾಯತ ಸಮುದಾಯವು ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ,” ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಒಬ್ಬ ವ್ಯಕ್ತಿಯು ಧಾರ್ಮಿಕ ಸಂಬಂಧದಿಂದ ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ”ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ. ಗುರುತುಗಳ ಸಹಬಾಳ್ವೆ ಕಾನೂನು ಸಾಧ್ಯತೆಯ ವಿಷಯವಾಗಿದೆ,” ಎಂದು ನ್ಯಾಯಪೀಠವು ವಿವರಿಸಿದೆ.

“ಎಂ.ವಿ. ಚಂದ್ರಕಾಂತ್ ವಿರುದ್ಧ ಸಂಗಪ್ಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಹಾವನೂರು ಆಯೋಗದ ವರದಿ ಪ್ರಕಾರ, ವೀರಶೈವ/ಲಿಂಗಾಯತ ಸಮುದಾಯವು ವಿಭಿನ್ನ ಜಾತಿ ಬ್ಯಾಕ್ ಗಳನ್ನು ಒಳಗೊಳ್ಳುವ ಮೂಲಕ ಅಭಿವೃದ್ಧಿಯಾಯಿತು; ಅವುಗಳಲ್ಲಿ ಅನೇಕವು ಸಾಮಾನ್ಯ ಪಂಥದೊಳಗೆ ಭಾಗಿಯಾಗಿದ್ದರೂ ತಮ್ಮ ವೃತ್ತಿ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡಿದ್ದವು. ಆಯೋಗವು ಗಾಣಿಗರು (ಎಣ್ಣೆ ತೆಗೆಯುವವವರು), ಕುಂಬಾರರು (ಮಡಕೆಗಾರರು), ಕ್ಷೌರಿಕರು (ಕ್ಷೌರಿಕರು), ಅಗಸರು (ಧೋಬಿಗಳು) ಮತ್ತು ಇತರೆ ಗುಂಪುಗಳನ್ನು ಐತಿಹಾಸಿಕವಾಗಿ ವೀರಶೈವ ವಲಯದೊಳಗೆ ಅಥವಾ ಅದರೊಂದಿಗೆ ಜೊತೆಯಾಗಿ ಇದ್ದರೂ ಪ್ರತ್ಯೇಕ ಗುರುತನ್ನು ಉಳಿಸಿಕೊಂಡ ಜಾತಿ ಘಟಕಗಳೆಂದು ಗುರುತಿಸಿತು ಎಂಬುದನ್ನು ಉಲೇಖಿಸಿದೆ.

ಸುಪ್ರೀಂ ಕೋರ್ಟ್ 03.03.2002ರ ಅಧಿಸೂಚನೆಯ ಮೂಲಕ “ಗಾಣಿಗ”ರನ್ನು ವರ್ಗ II-ಂ ಯಲ್ಲಿ ವರ್ಗೀಕರಿಸಿರುವುದು; 27.01.2009ರ ಅದೇಶದಿಂದ ಲಿಂಗಾಯತ/ವೀರಶೈವ-ಗಾಣಿಗರನ್ನು ತಾತ್ಕಾಲಿಕವಾಗಿ ವರ್ಗ III-ಃ ಯಲ್ಲಿ ಸೇರಿಸಿರುವುದು; ಮತ್ತು 28.02.2009ರ ಅಧಿಸೂಚನೆಯ ಮೂಲಕ ಹಿಂದಿನ ವರ್ಗೀಕರಣವನ್ನು ಮರುಸ್ಥಾಪಿಸಿರುವುದನ್ನೂ ಪರಿಶೀಲಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನೆಲೆ …
ಪೊಲೀಸ್ ಕಾನ್ ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ಅರ್ಜಿದಾರರಾದ ಟಿ.ಎನ್. ಜಗದೀಶ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಈ ನಡುವೆ, ಬಾಗಲಕೋಟೆಯ ರಾಜಕುಮಾರ್ ವೈ. ಬೀಳಗಿ ಎಂಬುವವರು ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ ಅಡಿಯಲ್ಲಿ ಲಿಂಗಾಯತ – ಗಾಣಿಗ ಸಮುದಾಯಕ್ಕೆ ನೀಡಲಾಗುವ ಮೀಸಲು ಪ್ರಯೋಜನಗಳನ್ನು ಪಡೆಯಲು ಲಿಂಗಾಯತ – ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರ ನೀಡುವ ಮೂಲಕ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ನ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.