ಇಲಾಖಾ ವಿಚಾರಣೆಯಲ್ಲಿ ಕ್ಲೀನ್ ಚಿಟ್ ಸಿಕ್ಕರೇ ಕ್ರಿಮಿನಲ್ ಪ್ರಕರಣ ಕೈಬಿಡಬಹುದೇ..? ಹೈಕೋರ್ಟ್ ಸ್ಪಷ್ಟನೆಯೇನು?
ಬೆಂಗಳೂರು ಸರ್ಕಾರಿ ನೌಕರರಿಗೆ ಇಲಾಖಾ ವಿಚಾರಣೆಯಲ್ಲಿ ಕ್ಲಿನ್ ಚಿಟ್ ಸಿಕ್ಕರೂ ಅವರ ವಿರುದ್ದದ ಕ್ರಿಮಿನಲ್ ಪ್ರಕರಣ ಕೈಬಿಡಬೇಕು ಎಂಬ ನಿಯಮವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತರಾದ ಮಾತ್ರಕ್ಕೆ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಕೈಬಿಡಬೇಕು ಎಂಬ ನಿಯಮವಿಲ್ಲ ಎಂದು ಹೇಳಿತು. ಹಾಗೆಯೇ ಲಂಚ ಪಡೆದ ಆರೋಪದಲ್ಲಿ ಚಿತ್ರದುರ್ಗದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಅಧೀಕ್ಷಕಿ ಆರ್. ಗೀತಾ ಮೇಲೆ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತು.
ಇಲಾಖಾ ವಿಚಾರಣೆಯ ದೋಷಮುಕ್ತಿಯು ಕ್ರಿಮಿನಲ್ ವಿಚಾರಣೆ ಮೇಲೆ ಪ್ರಭಾವ ಬೀರಬಹುದೇ ಹೊರತು ಅದನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಅಸ್ತವಾಗಬಾರದು. ಒಂದುವೇಳೆ ಟ್ರ್ಯಾಪ್ ಕಾರ್ಯಾಚರಣೆ ವಿಫಲವಾಗಿದ್ದರೆ ಅಥವಾ ಲಂಚದ ಬೇಡಿಕೆಗೆ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಮಾತ್ರ ರದ್ದು ಮಾಡುವ ಬಗ್ಗೆ ಯೋಚಿಸಬಹುದು. ಬಲವಾದ ಸಾಕ್ಷಾಧಾರಗಳಿದ್ದಾಗ ಪ್ರಕರಣ ಮುಂದುವರಿಸುವುದು ನ್ಯಾಯದ ದೃಷ್ಟಿಯಿಂದ ಅಗತ್ಯ ಎಂದು ನ್ಯಾಯಪೀಠ ತಿಳಿಸಿದೆ.
ವಿಶೇಷವಾಗಿ ಸಾರ್ವಜನಿಕ ಅಧಿಕಾರಿಗಳು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣಗಳಲ್ಲಿ, ಹಣದ ವಶಪಡಿಸಿಕೊಳ್ಳುವಿಕೆ, ಧ್ವನಿಮುದ್ರಿತ ಸಂಭಾಷಣೆ ಮತ್ತು ವಿಧಿವಿಜ್ಞಾನ ವರದಿಗಳಂತಹ ಪ್ರಾಥಮಿಕ ಸಾಕ್ಷ್ಯಗಳಿದ್ದರೆ ಇಲಾಖಾ ವಿಚಾರಣೆಯ ದೋಷಮುಕ್ತಿಯು ಕ್ರಿಮಿನಲ್ ವಿಚಾರಣೆ ಮೇಲೆ ಪ್ರಭಾವ ಬೀರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರತಿಯೊಂದು ಪ್ರಕರಣವೂ ಅದರದ್ದೇ ಆದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿಂತಿರುತ್ತದೆ. ಲಂಚದ ಬೇಡಿಕೆ ಮತ್ತು ಸ್ವೀಕಾರದಂತಹ ಪ್ರಮುಖ ಅಂಶಗಳ ಬಗ್ಗೆ ಇಲಾಖಾ ತನಿಖೆಯಲ್ಲಿ ಸಾಕ್ಷ್ಯಗಳ ಕೊರತೆ ಕಂಡುಬಂದರೂ, ಕ್ರಿಮಿನಲ್ ನ್ಯಾಯಾಲಯದಲ್ಲಿ ಲಭ್ಯವಿರುವ ಸಾಕ್ಷ್ಯಗಳು ವಿಭಿನ್ನವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
