ಅಪ್ರಾಪ್ತರು ಪಬ್ ಗಳಿಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಹೈಕೋರ್ಟ್ ಸೂಚನೆ
ಬೆಂಗಳೂರು: ನಗರದಲ್ಲಿನ ಪಬ್ ಗಳಿಗೆ ಅಪ್ರಾಪ್ತರು ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಪಬ್ ಗಳ ಲೈಸೆನ್ಸ್ ರದ್ದುಗೊಳಿಸಿ ಎಂದು ಎಂದು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮೌಖಿಕವಾಗಿ ನಿರ್ದೇಶನ ನೀಡಿದೆ.
ಅಪ್ರಾಪ್ತ ಬಾಲಕನ ಅತ್ಮಹತ್ಯೆ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ರಾಜರಾಜೇಶ್ವರಿ ನಗರದ ಬ್ರೂವರಿಯೊಂದರ ಪಾಲುದಾರರಾಗಿರುವ ವಿ. ಚಿಟ್ಟಿ ಬಾಬು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಸೂಚನೆ ನೀಡಿದೆ.
ಜನವರಿ 31ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಪಬ್ ಗೆ ಭೇಟಿ ನೀಡಿದ್ದ ಎನ್ನಲಾಗಿದೆ. ಅದೇದಿನ ಸಂಜೆ ಆ ಬಾಲಕ ಪಾಲಕರ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದ . ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ ನ್ಯಾಯಪೀಠವು, ಅಪ್ರಾಪ್ತರು ಪಬ್ ಗಳಿಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸ್ ಆಯುಕ್ತರು ವಿಶೇಷ ನಿರ್ದೇಶನ ಹೊರಡಿಸಬೇಕು. ಪಬ್ ಗಳಿಗೆ ಬರುವ ಪ್ರತಿಯೊಬ್ಬರ ವಯಸ್ಸನ್ನು ಅಧಿಕೃತ ದಾಖಲೆಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸಬೇಕು. ಒಂದು ವೇಳೆ ಅಪ್ರಾಪ್ತರಿಗೆ ಪ್ರವೇಶ ನೀಡಿದ್ದು ಕಂಡುಬಂದಲ್ಲಿ ಅಂತಹ ಪಬ್ ಗಳ ಲೈಸೆನ್ಸ್ ರದ್ದು ಮಾಡುವಂತೆ ನ್ಯಾಯಪೀಠ ಸೂಚನೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
