ತೆರಿಗೆ ಬಾಕಿಯಿದ್ದರೆ ಆಸ್ತಿ ನೋಂದಣಿ ನಿರಾಕರಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್ ಗಳಿಗಿದೆಯೇ..?
ಬೆಂಗಳೂರು: ತೆರಿಗೆ ಬಾಕಿ ಇದೆ ಎಂಬ ಕಾರಣ ನೀಡಿ ಆಸ್ತಿ ನೋಂದಣಿ ಮಾಡಿಕೊಡುವುದನ್ನು ನಿರಾಕರಿಸುವಂತಿಲ್ಲ. ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲಗಳು ಇಲ್ಲದಿದ್ದರೆ ನೋಂದಣಿ ನಿರಾಕರಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ತೀರ್ಪು ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ತೀರ್ಪು ಪ್ರಕಟಿಸಿದ್ದು, ನಿಯಮಬಾಹಿರವಾಗಿ ನೋಂದಣಿಗೆ ನಿರಾಕರಿಸುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಆದಾಯ ತೆರಿಗೆ ಪಾವತಿ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿಯ ನೋಂದಣಿ ಮಾಡುವುದಕ್ಕೆ ನಿರಾಕರಿಸುವಂತಿಲ್ಲ ಎಂದು ತಿಳಿಸಿದೆ.
ಮುದ್ರಾಂಕ ಮತ್ತು ನೋಂದಣಿ ಕಾಯ್ದೆ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು, ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸುವಂತಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಗಳಿಗೆ ನ್ಯಾಯಪೀಠ ಸೂಚಿಸಿತು.
ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಹೊಂಬೇಗೌಡನಗರದಲ್ಲಿರುವ 6,000 ಚದರ ಅಡಿಯ ಅಡಮಾನ ಅಸ್ತಿಯನ್ನು 2022ರ ಮಾರ್ಚ್ ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿತ್ತು. ಈ ವೇಳೆ ಭರತ್ ಗೌಡ ಎಂಬುವವರು ಹರಾಜಿನಲ್ಲಿ ಆಸ್ತಿ ಖರೀದಿಸಿದ್ದು ಹರಾಜು ಪ್ರಕ್ರಿಯೆಗಳು ಮುಗಿದ ನಂತರ 2022ರ ಸೆಪ್ಟೆಂಬರ್ ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು.
ನಂತರ ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕ ಪಾವತಿಸಿದ್ದ ಅರ್ಜಿದಾರ ಭರತ್ ಗೌಡ ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಜೆ.ಪಿ. ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಆದರೆ ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಪಾವತಿಸಿಲ್ಲ. ಹಾಗಾಗಿ, ಸದರಿ ಆಸ್ತಿಯನ್ನು ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ” ಎಂದು ಸಬ್ ರಿಜಿಸ್ಟ್ರಾರ್ ಮೌಖಿಕವಾಗಿ ತಿಳಿಸಿದ್ದರು 2024ರ ಫೆ. 18ರಂದು ಅರ್ಜಿದಾರರು ಆಸ್ತಿ ನೋಂದಣಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮುದ್ರಾಂಕ ಮತ್ತು ನೋಂದಣಿ ಕಾಯಿದೆ ಮತ್ತು ರಾಜ್ಯ ಸರಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪ ನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸಬಹುದಾಗಿದೆ. ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಅವರ ಆಸ್ತಿ ಖರೀದಿ ಮಾಡಿದವರಿಗೆ ನೋಂದಣಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿತು.
ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲಗಳು ಇಲ್ಲದಿದ್ದರೆ ನೋಂದಣಿ ನಿರಾಕರಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ನೋಂದಣಿ ನಿಯಮಗಳ ಕುರಿತು ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
