23/04/2026

Law Guide Kannada

Online Guide

ನಿಯಮಿತ ನೇಮಕಾತಿ ಬದಿಗಿಟ್ಟು ಹೊರಗುತ್ತಿಗೆ ನೇಮಕಕ್ಕೆ ಹೈಕೋರ್ಟ್ ಕಿಡಿ

ಅಲಹಾಬಾದ್: ನಿಯಮಿತ ನೇಮಕಾತಿ ಮಾಡದೆ ದೀರ್ಘಕಾಲಿಕವಾಗಿಯ ಹೊರಗುತ್ತಿಗೆ ಮೂಲಕ ಸಿಬ್ಬಂದಿಗಳನ್ನ ನೇಮಿಸಿಕೊಳ್ಳುವುದು ಶೋಷಣೆ ಮತ್ತು ಅನ್ಯಾಯವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸಾರ್ವಜನಿಕ ಉದ್ಯೋಗದಾತರು ನಿಯಮಿತ ನೇಮಕಾತಿ ಪ್ರಕ್ರಿಯೆಯನ್ನು ತಪ್ಪಿಸಲು ನಿರಂತರವಾಗಿ ಹೊರಗುತ್ತಿಗೆ/ ಔಟ್ ಸೋರ್ಸಿಂಗ್ ಸಂಸ್ಥೆಗಳ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡುತ್ತಿರುವ ಕ್ರಮವನ್ನು ಹೈಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ಡಿ. ಚೌಹಾನ್ ಅವರ ಪೀಠವು ತೀವ್ರವಾಗಿ ಖಂಡಿಸಿದ್ದು ಇಂತಹ ವ್ಯವಸ್ಥೆ “ಶೋಷಣೆ ಮತ್ತು ಅನ್ಯಾಯಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ನಿಯಮಿತ ನೇಮಕಾತಿಗಳನ್ನು ಬದಿಗಿಟ್ಟು ದೀರ್ಘಕಾಲಿಕ ಹೊರಗುತ್ತಿಗೆ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡುವುದು ಅನ್ಯಾಯವಾಗಿದೆ. ರಾಜ್ಯವು ಶೋಷಣಾತ್ಮಕವಾಗಿ ವರ್ತಿಸಬಾರದು ಎಂದು ಕಿಡಿಕಾರಿದೆ.

ಬರೇಲಿ ನಗರ ನಿಗಮಕ್ಕೆ 13 ವರ್ಷಕ್ಕಿಂತ ಹೆಚ್ಚು ಕಾಲ ಔಟ್ ಸೋರ್ಸಿಂಗ್ ಮೂಲಕ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ನಿಯಮಿತೀಕರಣದ ಮನವಿಯನ್ನು ಪರಿಗಣಿಸಲು ನಿರ್ದೇಶನ ನೀಡಿದ ನ್ಯಾಯಪೀಠವು, ದೀರ್ಘಕಾಲಿಕವಾಗಿ ಔಟ್ ಸೋರ್ಸಿಂಗ್ ಅಥವಾ ದಿನಗೂಲಿ ಅಧಾರದಲ್ಲಿ ಅವಿಭಾಜ್ಯ ಸ್ವಭಾವದ ಕೆಲಸಗಳನ್ನು ಮಾಡಿಸುತ್ತಿರುವುದು, ವಿಶೇಷವಾಗಿ ಇಲಾಖೆಯ ಕಾರ್ಯಗಳನ್ನು ಔಟ್ ಸೋರ್ಸಿಂಗ್ ಸಂಸ್ಥೆಗಳ ಮೂಲಕ ಪೂರೈಸುವ ಮಾನವ ಸಂಪನ್ಮೂಲದಿಂದ ನಿರ್ವಹಿಸುವುದರಿಂದ, ಮಾನ್ಯ ಹುದ್ದೆಗಳ ಮೇಲೆ ನಿಯಮಿತ ನೇಮಕಾತಿ ವಿಧಾನವನ್ನು ನಿರ್ಲಕ್ಷಿಸುವುದು ಅಥವಾ ತಪ್ಪಿಸುವುದು ಶೋಷಣಾತ್ಮಕ ಉದ್ಯೋಗ ಪದ್ಧತಿಯನ್ನು ಸೂಚಿಸುತ್ತದೆ’ ಎಂದು ತನ್ನ ಆದೇಶದಲ್ಲಿ ತಿಳಿಸಿತು.

ಕಾಫಿ ಅಹ್ಮದ್ ಖಾನ್ ಎಂಬ ವ್ಯಕ್ತಿ 2011ರ ನವೆಂಬರ್ 1ರಂದು ಬರೇಲಿ ನಗರ ನಿಗಮದ ನಿರ್ಮಾಣ ವಿಭಾಗದಲ್ಲಿ ದಿನಗೂಲಿ ಕಂಪ್ಯೂಟರ್ ಆಪರೇಟರ್ ಆಗಿ ನೇಮಕಗೊಂಡಿದ್ದರು. 2012ರ ಆಗಸ್ಟ್ನಲ್ಲಿ ಸರ್ಕಾರದ ನಿರ್ದೇಶನದಂತೆ ಅವರ ಸೇವೆಯನ್ನು ರದ್ದುಗೊಳಿಸಲಾಯಿತು. ನಂತರ ಅವರ ಸೇವೆಯನ್ನು ನಿಗಮದ ನೋಂದಾಯಿತ ಗುತ್ತಿಗೆದಾರನ ಮೂಲಕ ವರ್ಗಾಯಿಸಲಾಗಿದ್ದು, ಆಗಿನಿಂದ ಅವರು ಒಪ್ಪಂದದ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ಅವರ ನಿಯಮಿತೀಕರಣದ ಮನವಿಯನ್ನು ಹೈಕೋರ್ಟ್ ಅಧಿಕಾರಿಗಳಿಗೆ ಪರಿಗಣಿಸಲು ಸೂಚಿಸಿತ್ತು. ಆದರೆ 2020ರ ಡಿಸೆಂಬರ್ ನಲ್ಲಿ ನಗರ ಆಯುಕ್ತರು ಅದನ್ನು ತಿರಸ್ಕರಿಸಿದರು. 2016ರ ಫೆಬ್ರವರಿ ಸರ್ಕಾರದ ಆದೇಶವನ್ನು ಉಲ್ಲೇಖಿಸಿ, 2001ರ ಡಿಸೆಂಬರ್ 31ರೊಳಗೆ ನೇಮಕಗೊಂಡ ದಿನಗೂಲಿ ನೌಕರರಿಗೆ ಮಾತ್ರ ನಿಯಮಿತೀಕರಣ ಸಾಧ್ಯ ಎಂದು ಹೇಳಿದ್ದಾರೆ.

ಇಲಾಖೆಯ ಕೆಲಸವನ್ನು ಔಟ್ ಸೋರ್ಸಿಂಗ್ ಮಾಡುವುದಕ್ಕೂ, ಇಲಾಖೆಯ ಒಳಗಿನ ಕಾರ್ಯಗಳನ್ನು ನಿರ್ವಹಿಸಲು ಕೇವಲ ಮಾನವ ಸಂಪನ್ಮೂಲವನ್ನು ಔಟ್ಸೋರ್ಸಿಂಗ್ ಮೂಲಕ ಪಡೆಯುವುದಕ್ಕೂ ನಡುವಿನ ವ್ಯತ್ಯಾಸವನ್ನು ವಿವರಿಸಿದೆ. ದೀರ್ಘಕಾಲ ಔಟ್ ಸೋರ್ಸಿಂಗ್ ಮೂಲಕ ಉದ್ಯೋಗಿಗಳನ್ನು ಬಳಸುವುದು ಮೂಲತಃ ಅನ್ಯಾಯಕರವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ವಿಭಾಗದ ಕೆಲಸ ಶಾಶ್ವತವಾಗಿ ಹೆಚ್ಚಾದಾಗ, ಸಂಬಂಧಿತ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯ. ಆದರೆ ಅದನ್ನು ಮಾಡದೆ, ಉದ್ಯೋಗದಾತರು ಔಟ್ ಸೋರ್ಸಿಂಗ್ ಸಂಸ್ಥೆಗಳನ್ನೇ ಬಳಸುತ್ತಿರುವುದು ಸಾಮಾನ್ಯವಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.

ನ್ಯಾಯಮೂರ್ತಿ ಚೌಹಾನ್ ಅವರು, ನ್ಯಾಯಯುತ ಉದ್ಯೋಗ ಪದ್ಧತಿಗಳನ್ನು ಅನುಸರಿಸುವುದರಿಂದ ಅನಾವಶ್ಯಕ ವ್ಯಾಜ್ಯಗಳನ್ನು ಕಡಿಮೆ ಮಾಡಬಹುದು, ಉದ್ಯೋಗ ಭದ್ರತೆಯನ್ನು ಹೆಚ್ಚಿಸಬಹುದು ಮತ್ತು ನ್ಯಾಯತತ್ವಗಳನ್ನು ಉಳಿಸಬಹುದು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯ ಮೇಲೆ, ನ್ಯಾಯಾಲಯವು ಬರೇಲಿ ನಗರ ನಿಗಮದ ಆಯುಕ್ತರು ನೀಡಿದ್ದ ಆದೇಶವನ್ನು ರದ್ದುಗೊಳಿಸಿ, ಅರ್ಜಿದಾರರ ನಿಯಮಿತೀಕರಣದ ಮನವಿಯನ್ನು ಮರುಪರಿಗಣಿಸಲು ನಿರ್ದೇಶಿಸಿದೆ. ಈ ಪ್ರಕ್ರಿಯೆಯನ್ನು ನಾಲ್ಕು ತಿಂಗಳೊಳಗೆಪೂರ್ಣಗೊಳಿಸಲು ಸೂಚಿಸಿ, ಅರ್ಜಿಯನ್ನು ಪುರಸ್ಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.