23/04/2026

Law Guide Kannada

Online Guide

ವೈವಾಹಿಕ ಭಿನ್ನಾಭಿಪ್ರಾಯದಿಂದ ಪತಿ ಆತ್ಮಹತ್ಯೆಗೆ ಶರಣಾದ್ರೆ ಅದಕ್ಕೆ ಪತ್ನಿ ಹೊಣೆಯಲ್ಲ : ಹೈಕೋರ್ಟ್

ನಾಗ್ಪುರ: ದಾಂಪತ್ಯ ಕಲಹ ವೈವಾಹಿಕ ಭಿನ್ನಾಭಿಪ್ರಾಯದ ಕಾರಣದಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೇ ಅದಕ್ಕೆ ಪತ್ನಿ ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ಮಹತ್ವದ ತೀರ್ಪು ಪ್ರಕಟಿಸಿದೆ.

ಮೃತ ವ್ಯಕ್ತಿಯ ತಂದೆ ತನ್ನ ಸೊಸೆಯ ವಿರುದ್ಧ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು, ದಾಂಪತ್ಯ ಕಲಹದ ಕಾರಣದಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪತ್ನಿಯನ್ನು ‘ಆತ್ಮಹತ್ಯೆಗೆ ಪ್ರೇರಣೆ’ ನೀಡಿದ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಂಸಾರಿಕ ಜೀವನದಲ್ಲಿ ಪತಿ-ಪತ್ನಿಯ ನಡುವಿನ ಸಾಮಾನ್ಯ ಜಗಳಗಳು, ನಿಂದನೆ ಅಥವಾ ಪತ್ನಿ ಪದೇ ಪದೇ ತವರು ಮನೆಗೆ ಹೋಗುವುದನ್ನು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ವರ್ಗೀಕರಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಸಾವಿನ ಹಾದಿ ಹಿಡಿಯುವಂತೆ ಪ್ರಚೋದಿಸುವ ಸ್ಪಷ್ಟ ಉದ್ದೇಶವಿದ್ದರೆ ಮಾತ್ರ ಅದು ಅಪರಾಧವಾಗುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನವೆಂಬರ್ 26, 2019 ರಂದು ವ್ಯಕ್ತಿಯೊಬ್ಬ ರೈಲಿಗೆ ಅಡ್ಡಬಂದು ಆತ್ಮಹತ್ಯೆಗೆ ಶರಣಾಗಿದ್ದನು. ಮಗನ ಸಾವಿನಿಂದ ನೊಂದ ತಂದೆ, ತನ್ನ ಸೊಸೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ನನ್ನ ಮಗನ ಜೊತೆ “ಸೊಸೆಯು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದಳು, ನಿಂದಿಸುತ್ತಿದ್ದಳು ಮತ್ತು ಪತಿಗೆ ತಿಳಿಸದೆಯೇ ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಕಿರುಕುಳ ತಾಳಲಾರದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಂದೆ ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪತ್ನಿಯ ವಿರುದ್ಧ ‘ಆತ್ಮಹತ್ಯೆಗೆ ಪ್ರೇರಣೆ’ ಪ್ರಕರಣ ದಾಖಲಿಸಿದ್ದರು.

ಈ ನಡುವೆ ತನ್ನ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಕೋರಿ ಸೊಸೆ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪತ್ನಿಯ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಪತಿ-ಪತ್ನಿಯ ನಡುವಿನ ಸಾಮಾನ್ಯ ವಾದಗಳು ಅಥವಾ ಭಿನ್ನಾಭಿಪ್ರಾಯಗಳು ಆತ್ಮಹತ್ಯೆಗೆ ಪ್ರೇರಣೆ ನೀಡುವ ವ್ಯಾಪ್ತಿಗೆ ಬರುವುದಿಲ್ಲ” ಎಂದು ಅಭಿಪ್ರಾಯಪಟ್ಟು, ಪತ್ನಿಯ ವಿರುದ್ಧದ ಎಫ್ಐಆರ್ ರದ್ದುಗೊಳಿಸಿ ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.