23/04/2026

Law Guide Kannada

Online Guide

ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ: ಬಡ ಕುಟುಂಬಕ್ಕೆ ನ್ಯಾಯ ಒದಗಿಸಿದ ಹೈಕೋರ್ಟ್

ಬೆಂಗಳೂರು: ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ. ‘ಲೋಕ ಅದಾಲತ್ನಲ್ಲಿ ವ್ಯಾಜ್ಯಕರ್ತ, ಉಭಯ ಪಕ್ಷಗಾರರ ಅನುಪಸ್ಥಿತಿಯಲ್ಲಿ ತೀರ್ಪು ಅಂಗೀಕೃತವಾಗಿದ್ದರೆ ಅಂತಹ ತೀರ್ಪು ಎಲ್ಲ ಕಾಲಕ್ಕೂ ಕಾನೂನುಬದ್ದವಾಗಿದೆ ಮತ್ತು ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಿಪಡಿಸಿರುವ ಹೈಕೋರ್ಟ್ ಬಡ ಕುಟುಂಬಕ್ಕೆ ತನ್ನ ತೀರ್ಪಿನ ಮೂಲಕ ನ್ಯಾಯ ಒದಗಿಸಿದೆ.

ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಲೋಕ ಅದಾಲತ್ ತೀರ್ಪು ಪ್ರಶ್ನಿಸಿ ಹುಬ್ಬಳ್ಳಿ ಆನಂದನಗರದ ಬಡ ಕುಟುಂಬದ ತಾಯಿ-ಮಗ, ಶೈಲಾ ಐ ಕರ್ಕಿಹಳ್ಳಿಮಠ (37) ಮತ್ತು ವಿಶಾಲ್ ಐ ಕರ್ಕಿಹಳ್ಳಿಮಠ (11) ಎಂಬುವವರು ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿ ಪುರಷ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಲೋಕ ಅದಾಲತ್ ನಲ್ಲಿ ನಮಗೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವುದು ತಪ್ಪಾಗಿದೆ. ನಮ್ಮ ಪರವಾದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿಯ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಯಾವತ್ತೂ ಗಮನಕ್ಕೆ ಬಂದೇ ಇರಲಿಲ್ಲ. ಆದ್ದರಿಂದ, ಲೋಕ ಅದಾಲತ್ ನಲ್ಲಿ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿರುವುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಅರ್ಜಿದಾರರ ವಾದವನ್ನು ಮನ್ನಿಸಿತು.

‘ಅರ್ಜಿ ದಾಖಲಿಸಿದ ದಿನದಿಂದ ಅರ್ಜಿದಾರರಿಗೆ ಪಾವತಿಯಾಗುವ ದಿನದವರೆಗೆ ವಾರ್ಷಿಕ ಶೇ 6ರ ಬಡ್ಡಿಯಂತೆ 9,18,600 ರೂ. ಪರಿಹಾರ ನೀಡಬೇಕು’ ಎಂಬ ನ್ಯಾಯಮಂಡಳಿ ಆದೇಶವನ್ನು ಪುನರ್ ಸ್ಥಾಪಿಸಿದೆ.

‘ಲೋಕ ಅದಾಲತ್ ನಲ್ಲಿ ಉಭಯ ಪಕ್ಷಗಾರರು ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಅದಾಲತ್ ನ ಹೊರಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಅವರು ಸಹಿ ಹಾಕುವುದಿಲ್ಲ ಎಂಬುದನ್ನು ಲೋಕ ಅದಾಲತ್ ಸದಸ್ಯರು ಖಚಿತಪಡಿಸಿಕೊಳ್ಳಬೇಕು’ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ಏನಿದು ಪ್ರಕರಣ…
ಶೈಲಾ ಐ ಕರ್ಕಿಹಳ್ಳಿಮಠ ಅವರ ಪತಿ (41) ಬಾಣಸಿಗನಾಗಿ ತಿಂಗಳಿಗೆ 6 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.
ಪರಿಹಾರ ಕೋರಿಕೆಗಾಗಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು, ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಪುರಸ್ಕರಿಸಿ ಪರಿಹಾರ ನೀಡಿಕೆಗಾಗಿ 2013 ನವೆಂಬರ್ 13ರಂದು ಆದೇಶಿಸಿತ್ತು.

ಈ ಪರಿಹಾರ ನೀಡಿಕೆ ಮೊತ್ತವನ್ನು ಪ್ರಶ್ನಿಸಿ ಐಸಿಐಸಿಐ ಇನ್ಸೂರೆನ್ಸ್ ಕಂಪನಿ 2014ರಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಪ್ರಕರಣವನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಲು ಶಿಫಾರಸು ಮಾಡಲಾಗಿತ್ತು. ಧಾರವಾಡ ಪೀಠದಲ್ಲಿ ನಡೆದ ಲೋಕ ಅದಾಲತ್ ನಲ್ಲಿ, ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯು ಪರಿಹಾರದ 9.18,600 ರೂ. ಮೊತ್ತವನ್ನು 7,82,000 ರೂ.ಕ್ಕೆ ಇಳಿಸಿ ಅಂತಿಮಗೊಳಿಸಿತ್ತು.

ಈ ತೀರ್ಪಿನ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದ ಶೈಲಾ ಮತ್ತು ಮಗ, ‘ಲೋಕ ಅದಾಲತ್ ಮುಂದೆ ಪರಿಹಾರದ ಮೊತ್ತವನ್ನು ಕಡಿಮೆ ಮಾಡುವಾಗ ನಮ್ಮ ಕಡೆಯ ವಕೀಲರು ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದು ಮತ್ತು ಇದಕ್ಕಾಗಿ ಸಲ್ಲಿಸಲಾದ ಜಂಟಿ ಮೆಮೊಗೆ ಸಹಿ ಹಾಕಿರುವುದು ನಮ್ಮ ಅರಿವಿಗೆ ಬಂದಿರಲಿಲ್ಲ. ಹಾಗಾಗಿ, ಮಿಶ್ರಿತ ಮೊದಲ ಮೇಲ್ಮನವಿಗೆ (ಎಂಎಫ್ಎ) ಸಂಬಂಧಿಸಿದಂತೆ ಲೋಕ ಅದಾಲತ್ 2019ರ ಜುಲೈ 13ರಂದು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು.

‘ಉಭಯ ಪಕ್ಷಗಾರರು ಮಾಡಿಕೊಂಡ ಇತ್ಯರ್ಥ ಅಥವಾ ಒಪ್ಪಂದಕ್ಕೆ ತಮ್ಮ ಸಮ್ಮುಖದಲ್ಲಿ ಮಾತ್ರವೇ ತಮ್ಮ ಸಹಿ ಹಾಕುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಲೋಕ ಅದಾಲತ್ನ ಸದಸ್ಯರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿರುವ ನ್ಯಾಯಪೀಠವು 9,18,600 ರೂ. ಪರಿಹಾರ ನೀಡಬೇಕು’ ಎಂಬ ನ್ಯಾಯಮಂಡಳಿ ಆದೇಶವನ್ನ ಎತ್ತಿಹಿಡಿಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.