24/04/2026

Law Guide Kannada

Online Guide

ಪತಿ ನಿರುದ್ಯೋಗಿ, ಪತ್ನಿ ಉದ್ಯೋಗಸ್ಥೆ: ಜೀವನಾಂಶ ಕುರಿತು ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್

ಬೆಂಗಳೂರು : ನಿರುದ್ಯೋಗಿಯಾಗಿರುವ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಿದ್ದ ಉದ್ಯೋಗಸ್ಥ ಪತ್ನಿಗೆ ಹೈಕೋರ್ಟ್ ಶಾಕ್ ನೀಡಿದೆ.

ನಿರುದ್ಯೋಗಿ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಿ ಉದ್ಯೋಗಸ್ಥ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಜತೆಗೆ, ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಲೂ ನಿರಾಕರಿಸಿ ನ್ಯಾಯಪೀಠ ಮಹತ್ವದ ತೀರ್ಪು ಕೊಟ್ಟಿದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶದ ಮೊತ್ತ ಹೆಚ್ಚಳ ಕೋರಿ ಪತ್ನಿ ಹಾಗೂ ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು, ಪತಿಗೆ ಬರಬೇಕಾದ ಪೂರ್ವಜರ ಆಸ್ತಿ ಇನ್ನೂ ಹಂಚಿಕೆಯಾಗಿಲ್ಲ. ಪೂರ್ವಜರ ಆಸ್ತಿ ಇದೆ ಎಂಬ ಕಾರಣವು ಜೀವನಾಂಶ ಹೆಚ್ಚಳಕ್ಕೆ ಆಧಾರವಾಗುವುದಿಲ್ಲ. ಪತಿಯ ಪಾಲಿಗೆ 1 ಎಕರೆ ಜಮೀನಿದ್ದು, ಅದನ್ನು ಎರಡು ಬಾರಿ ಅಡಮಾನವಿಟ್ಟು ಸಾಲ ಪಡೆದಿದ್ದಾರೆ. ಒಂದು ವೇಳೆ ಸಾಲ ಪಡೆದೂ ಜೀವನಾಂಶ ನೀಡದಿದ್ದಲ್ಲಿ, ಅವರು ಜೀವನಾಂಶ ಪಾವತಿಸಲು ಸಿದ್ಧರಿಲ್ಲ ಎಂದು ತಿಳಿಯಬಹುದು. ಆದರೆ, ಸಾಲ ಪಡೆದ ನಂತರ ಪತ್ನಿಗೆ ಜೀವನಾಂಶ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿತು.
ಪತಿ ನಿರುದ್ಯೋಗಿಯಾಗಿದ್ದು, ಪತ್ನಿ ದುಡಿಯುತ್ತಿದ್ದಾರೆ. ದಂಪತಿಯ ವಿವಾದದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದ್ದರಿಂದ, ನಿರ್ವಹಣಾ ವೆಚ್ಚ ಹೆಚ್ಚಳ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ದಂಪತಿ ಸಲ್ಲಿಸಿದ್ದ ಎರಡೂ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ:
2009ರಲ್ಲಿ ಅರ್ಜಿದಾರ ದಂಪತಿಗಳು ಮದುವೆಯಾಗಿದ್ದರು. ಈ ನಡುವೆ ಪತಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಪದೇಪದೆ ಒತ್ತಾಯಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಪತ್ನಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಪತ್ನಿಗೆ ಯಾವುದೇ ರೀತಿಯ ಕೌಟುಂಬಿಕ ಹಿಂಸಾಚಾರ ನೀಡದಂತೆ ನಿರ್ಬಂಧಿಸಿ ಆದೇಶಿಸಿತ್ತು. ಜೊತೆಗೆ ಪತ್ನಿಗೆ ಜೀವನಾಂಶಕ್ಕಾಗಿ ಮಾಸಿಕ 4 ಸಾವಿರ ರೂ. ಹಾಗೂ ಮನೆ ಬಾಡಿಗೆಗಾಗಿ 5 ಸಾವಿರ ರೂ. ಸೇರಿ ಮಾಸಿಕ 9 ಸಾವಿರ ರೂ. ನೀಡಬೇಕು. ಜತೆಗೆ, 40 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿತ್ತು.

ಈ ಆದೇಶವನ್ನು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ದೃಢೀಕರಿಸಿತ್ತು. ಇದರಿಂದ, ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಹಾಗೂ ಜೀವನಾಂಶ ಹೆಚ್ಚಳಕ್ಕೆ ಕೋರಿ ಪತ್ನಿ ಹೈಕೋರ್ಟ್ ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.