ಮಹಿಳೆಯರಿಗೆ ನಮಾಜ್ ಮಾಡಲು ಮಸೀದಿಗೆ ಪ್ರವೇಶವಿದೆಯೇ? ಸುಪ್ರೀಂಗೆ ತನ್ನ ಅಭಿಪ್ರಾಯ ತಿಳಿಸಿದ ಮುಸ್ಲಿಂ ಕಾನೂನು ಮಂಡಳಿ
ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿಗಳಿಗೆ ನಮಾಜ್ ಮಾಡಲು ಪ್ರವೇಶಕ್ಕೆ ನಿರ್ಬಂಧವಿಲ್ಲ. ಆದರೆ, ಕೆಲ ಷರತ್ತುಗಳು ಅನ್ವಯ ಎಂದು ಎಂದು ಸುಪ್ರೀಂ ಕೋರ್ಟ್ ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತನ್ನ ಅಭಿಪ್ರಾಯ ತಿಳಿಸಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶದ ಕುರಿತು ವಿಚಾರಣೆ ನಡೆಸುತ್ತಿರುವ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬಯಸಿದ್ದ ಸಂಬಂಧ ಮುಸ್ಲಿಂ ಮಂಡಳಿಯು ತನ್ನ ಅಭಿಪ್ರಾಯವನ್ನು ತಿಳಿಸಿದೆ. ಮಹಿಳೆಯರಿಗೆ ನಿರ್ಬಂಧಗಳಿಲ್ಲದೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಘೋಷಿಸಲು ಕೋರಿ ಸಲ್ಲಿಸಲಾದ ರಿಟ್ ಅರ್ಜಿಯ ಸಂದರ್ಭದಲ್ಲಿ ಮಂಡಳಿ ಪರವಾಗಿ ಹಾಜರಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ.ಆರ್. ಶಂಶಾದ್, ”ಇಸ್ಲಾಂ ಧರ್ಮವು ಸಂಪೂರ್ಣವಾಗಿ ಲಿಖಿತ ಧರ್ಮವಾಗಿದ್ದು, ಏನು ನಿಷೇಧಿಸಲಾಗಿದೆ, ಕಡ್ಡಾಯವಾಗಿದೆ ಮತ್ತು ಶಿಫಾರಸು ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮತ್ತು ವಿವರವಾದ ಮಾರ್ಗದರ್ಶನವನ್ನು ಹೊಂದಿದೆ. ಇಸ್ಲಾಂ ಅಡಿಯಲ್ಲಿ ಧಾರ್ಮಿಕ ಆಚರಣೆಗಳನ್ನು ಚೆನ್ನಾಗಿ ವರ್ಗೀಕರಿಸಲಾಗಿದೆ,” ಎಂದು ತಿಳಿಸಿದರು.
ಮುಸ್ಲಿಂ ಮಹಿಳೆಯರು ಮಸೀದಿಗಳಿಗೆ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಅನುಮತಿ ಇದೆ ಎಂದು ಇಸ್ಲಾಮಿಕ್ ಪಂಗಡಗಳಲ್ಲಿ ಯಾವುದೇ ವಿವಾದವಿಲ್ಲ. ಮಹಿಳೆಯರು ಮಸೀದಿಗೆ ಪ್ರವೇಶಿಸುವ ವಿಚಾರದಲ್ಲಿ ಇಸ್ಲಾಮಿಕ್ ಪಂಥಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸಬಹುದು. ಆದರೆ, ಕೆಲ ಷರತ್ತುಗಳು ಅನ್ವಯವಾಗುತ್ತದೆ. ಅಲ್ಲಿ ಕೆಲವು ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ. ಅವರು ಮುಖ್ಯ ದ್ವಾರದಿಂದಲೇ ಪ್ರವೇಶಿಸಬೇಕು ಅಥವಾ ಪುರುಷ-ಮಹಿಳೆಯರ ನಡುವಿನ ಪರದೆಯನ್ನು (ತಡೆಗೋಡೆ) ತೆರವುಗೊಳಿಸಬೇಕು ಎಂದು ಒತ್ತಾಯಿಸಬಾರದು ಎಂದು ಶಂಶಾದ್ ಪೀಠಕ್ಕೆ ವಿವರಿಸಿದರು.
ಮಸೀದಿಗಳಲ್ಲಿ ಗರ್ಭಗುಡಿ ಎಂಬ ಪರಿಕಲ್ಪನೆ ಇಲ್ಲ. ಹೀಗಾಗಿ ಯಾರೊಬ್ಬರೂ ನಿರ್ದಿಷ್ಟ ಸ್ಥಳದಲ್ಲೇ ನಿಲ್ಲಬೇಕು ಎಂದು ಪಟ್ಟು ಹಿಡಿಯುವಂತಿಲ್ಲ ಅಥವಾ ಪ್ರಾರ್ಥನೆಯ (ನಮಾಜ್) ನೇತೃತ್ವ ವಹಿಸುವ ಹಕ್ಕನ್ನು ಪ್ರತಿಪಾದಿಸುವಂತಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪ್ರಶ್ನೆಗೆ ಉತ್ತರಿಸಿದ ಶಂಶಾದ್, “ಮಸೀದಿಗೆ ಪ್ರವೇಶಿಸಲು ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲ ಎಂಬುದರ ಕುರಿತು ಎಲ್ಲಾ ಇಸ್ಲಾಮಿಕ್ ಪಂಥಗಳಲ್ಲಿ ಸಹಮತವಿದೆ. ಆದರೆ, ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಳ್ಳುವುದು ಮಹಿಳೆಯರಿಗೆ ಕಡ್ಡಾಯವಲ್ಲ. ಈ ಮಧ್ಯೆ ಪುರುಷರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಆದರೆ ಮಹಿಳೆಯರಿಗೆ ಇದು ಐಚ್ಛಿಕ. ಮಹಿಳೆಯರು ಮನೆಯಲ್ಲೇ ಪ್ರಾರ್ಥನೆ ಮಾಡುವುದು ಹೆಚ್ಚು ಸೂಕ್ತ ಮತ್ತು ಇದರಿಂದ ಅವರಿಗೆ ಮಸೀದಿಯಲ್ಲಿ ಸಿಗುವಷ್ಟೇ ಧಾರ್ಮಿಕ ಪುಣ್ಯ ಲಭಿಸುತ್ತದೆ. ಆದಾಗ್ಯೂ, ಮಹಿಳೆ ಮಸೀದಿಗೆ ಹೋಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸಿದರೆ ಅದಕ್ಕೆ ಸಂಪೂರ್ಣ ಅನುಮತಿ ಇದೆ ಎಂದು ವಕೀಲ ಶಂಶಾದ್ ಸ್ಪಷ್ಟಪಡಿಸಿದರು.
ಪ್ರವಾದಿಯವರ ಕಾಲದಿಂದಲೂ ಮಹಿಳೆಯರು ಮಸೀದಿಗೆ ಪ್ರವೇಶಿಸುವ ಆಚರಣೆ ಇದೆ
ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, “ಪ್ರವಾದಿಯವರ ಕಾಲದಿಂದಲೂ ಮಹಿಳೆಯರು ಮಸೀದಿಗೆ ಪ್ರವೇಶಿಸುವ ಆಚರಣೆ ಇದೆ. ಈ ಬಗ್ಗೆ ಎಂದಿಗೂ ವಿವಾದವಿಲ್ಲ ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಶಂಶಾದ್, ಮಸೀದಿಗೆ ಬರುವ ಮಹಿಳೆಯರನ್ನು ತಡೆಯಬಾರದು ಎಂದು ಪ್ರವಾದಿಯವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
