ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ಮಗು ಪಡೆದ ನಂತರ ಅತ್ಯಾಚಾರ ಅಂದ್ರೆ ಹೇಗೆ? ಯುವತಿಗೆ ಸುಪ್ರೀಂ ಚಾಟಿ
ನವದೆಹಲಿ: ವ್ಯಕ್ತಿಯೊಂದಿಗೆ ಸಹಜೀವನ (Live-in relationship) ಸಂಬಂಧ ಹೊಂದಿ ಮಗು ಪಡೆದ ನಂತರ ಈಗ ಸಂಬಂಧ ಮುರಿದುಬಿದ್ದ ಮೇಲೆ ಅತ್ಯಾಚಾರ ನಡೆದಿದೆ ಎಂದರೇ ಹೇಗೆ ಎಂದು ಯುವತಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಮದುವೆಯ ಭರವಸೆ ನೀಡಿ ಅತ್ಯಾಚಾರ ಮತ್ತು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠವು, ಮದುವೆಯ ಬಂಧವಿಲ್ಲದ ಇಂತಹ ಸಂಬಂಧಗಳಲ್ಲಿ ಅಂತರ್ಗತವಾಗಿ ಕೆಲವು ಅಪಾಯಗಳಿರುತ್ತವೆ. ಸಹಜೀವನ (Live-in relationship) ಕಡಿದುಕೊಳ್ಳುವುದು ತನ್ನಷ್ಟಕ್ಕೆ ತಾನೇ ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, “ಮಹಿಳೆಯು ಮದುವೆಯಿಲ್ಲದೆಯೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ಮಗುವನ್ನೂ ಪಡೆದಿದ್ದಾರೆ, ಆದರೆ ಈಗ ಸಂಬಂಧ ಮುರಿದುಬಿದ್ದ ಮೇಲೆ ಅತ್ಯಾಚಾರ ಮತ್ತು ಹಲ್ಲೆಯ ಆರೋಪ ಮಾಡುತ್ತಿದ್ದಾರೆ, ಇದೇನಿದು?” ಎಂದು ಪ್ರಶ್ನಿಸಿದರು.
ವಯಸ್ಕರು ಸಮ್ಮತಿಯಿಂದ ದೀರ್ಘಕಾಲ ಒಟ್ಟಿಗೆ ವಾಸಿಸಿ ಸಂಬಂಧ ಹಳಸಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮದುವೆಯ ಹೊರಗಿನ ಸಂಬಂಧಗಳು ಕಡಿದುಕೊಂಡಾಗ ಮಹಿಳೆಯರು ಪುರುಷರ ಮೇಲೆ ಇಂತಹ ದೂರು ದಾಖಲಿಸುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠವು, ಸಮ್ಮತಿಯ ಸಂಬಂಧ ಮತ್ತು ಕ್ರಿಮಿನಲ್ ಅಪರಾಧದ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದೆ.
“ಮದುವೆಯಾಗದೆ ವ್ಯಕ್ತಿಯೊಂದಿಗೆ ವಾಸಿಸಲು ಮತ್ತು ಮಗು ಪಡೆಯಲು ಮಹಿಳೆಯು ಏಕೆ ನಿರ್ಧರಿಸಿದರು?” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಪ್ರಶ್ನಿಸಿದರು. ಆರೋಪಿಯು ಇತರ ಮಹಿಳೆಯರಿಗೂ ಇದೇ ರೀತಿ ವಂಚಿಸಿದ್ದಾನೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. “ನ್ಯಾಯಾಲಯವು ಕೇವಲ ಈ ಅರ್ಜಿದಾರರ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ಗಮನ ಹರಿಸುತ್ತದೆ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
