02/05/2026

Law Guide Kannada

Online Guide

ಪತಿಯು ಉದ್ಯೋಗವಿಲ್ಲವೆಂದು ಹೇಳಿ ಪತ್ನಿಗೆ ಜೀವನಾಂಶದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ಉದ್ಯೋಗವಿಲ್ಲವೆಂದು ಹೇಳಿ ಪತ್ನಿಗೆ ಜೀವನಾಂಶ ನೀಡುವ ಕಾನೂನುಬದ್ದ ಹೊಣೆಗಾರಿಕೆಯಿಂದ ಪತಿಯು ತಪ್ಪಿಸಿಕೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ 20,000 ರೂ. ಪಾವತಿಸಬೇಕೆಂದು ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಾಫ್ಟ್ವೇರ್ ಇಂಜಿನಿಯರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಲ್ಲಿಸಿದ್ದ ಈ ರಿಟ್ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಾ.ಕೆ. ಮನ್ಮದ ರಾವ್ ಅವರಿದ್ದ ಏಕಸದಸ್ಯ ಪೀಠವು, ಉದ್ಯೋಗವಿಲ್ಲವೆಂದು ಹೇಳುವ ಮೂಲಕ ಪತಿಯು ಪತ್ನಿಗೆ ಜೀವನಾಂಶ ನೀಡುವ ತನ್ನ ಕಾನೂನುಬದ್ಧ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಪುನರುಚ್ಚರಿಸಿದೆ.

ಪತಿಯು ಈ ಹಿಂದೆ ಅತ್ಯುನ್ನತ ಅರ್ಹತೆಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 4.5 ಲಕ್ಷ ರೂ. ಆದಾಯ ಪಡೆಯುತ್ತಿದ್ದರು. ಸಂಸ್ಥೆಯ ಪುನರ್ ವ್ಯವಸ್ಥೆಯ ಕಾರಣದಿಂದ 2023ರ ಸೆಪ್ಟೆಂಬರ್ ನಲ್ಲಿ ಉದ್ಯೋಗ ಕಳೆದುಕೊಂಡಿದ್ದರು. ಇದರಿಂದ ಜೀವನಾಂಶ ಪಾವತಿಸುವ ಹೊಣೆತನದಿಂದ ತಮಗೆ ವಿನಾಯಿತಿ ನೀಡಬೇಕೆಂದು ಪತಿ ಹೈಕೋರ್ಟ್ ನಲ್ಲಿ ವಾದಿಸಿದ್ದರು.

ಆದರೆ ನ್ಯಾಯಾಲಯವು ಈ ವಾದವನ್ನು ತಿರಸ್ಕರಿದ್ದು, ದೈಹಿಕ ಸಾಮರ್ಥ್ಯ ಹೊಂದಿರುವ ಹಾಗೂ ಉತ್ತಮ ಅರ್ಹತೆಯ ಗಂಡನು ಆದಾಯ ಗಳಿಸಲು ಸಮರ್ಥನಾಗಿದ್ದಾನೆ ಎಂಬ ಊಹೆ ಕಾನೂನಿನಡಿ ಅಸ್ತಿತ್ವದಲ್ಲಿದೆ. ಕೇವಲ ಉದ್ಯೋಗವಿಲ್ಲವೆಂದು ಹೇಳುವ ಮೂಲಕ ತನ್ನ ಕಾನೂನುಬದ್ಧ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಗಂಡನ ಹಿಂದಿನ ಹೆಚ್ಚಿನ ಆದಾಯ (TDS ದಾಖಲೆಗಳಿಂದ ದೃಢಪಟ್ಟಿರುವುದು) ಹಾಗೂ ಬೆಂಗಳೂರಿನಲ್ಲಿ ಒಂದು ಮನೆ ಮತ್ತು ಯುನೈಟೆಡ್ ಕಿಂಗಮ್ ನಲ್ಲಿ ಎರಡು ಆಸ್ತಿಗಳಿರುವುದು ಅವನಿಗೆ ಗಣನೀಯ ಆದಾಯ ಗಳಿಸುವ ಸಾಮರ್ಥ್ಯವಿದೆ ಎಂಬುದನ್ನು ತೋರಿಸುತ್ತದೆ. ಪತ್ನಿಯ ಸ್ವತಂತ್ರ ಆದಾಯ ಅಲ್ಪವಾಗಿದ್ದು, ವಿವಾಹ ಜೀವನದ ಅವಧಿಯಲ್ಲಿ ಅನುಭವಿಸಿದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಸಾಕಾಗುವುದಿಲ್ಲ. ಪತ್ನಿ ಉದ್ಯೋಗದಲ್ಲಿರುವುದೇ ಜೀವನಾಂಶ ಪಡೆಯುವುದಕ್ಕೆ ಅಡ್ಡಿಯಾಗುವುದಿಲ್ಲ. ಪತ್ನಿಯ ಆದಾಯವು ಕೇವಲ ಬದುಕಲು ಸಾಕಾಗುವುದೇ ಮಾನದಂಡವಲ್ಲ. ವಿವಾಹದ ಸಮಯದಲ್ಲಿ ಇದ್ದ ಜೀವನಮಟ್ಟವನ್ನು ಉಳಿಸಿಕೊಳ್ಳಲು ಸಾಕಾಗುವುದೇ ಮುಖ್ಯ ಮಾನದಂಡ ಎಂದು ನ್ಯಾಯಾಲಯ ತಿಳಿಸಿತು.

ಹೀಗಾಗಿ, ಕುಟುಂಬ ನ್ಯಾಯಾಲಯ ನೀಡಿದ್ದ ಮಧ್ಯಂತರ ಜೀವನಾಂಶದ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲವೆಂದು ಹೇಳಿ, ಹೈಕೋರ್ಟ್ ನ್ಯಾಯಪೀಠವು ಅರ್ಜಿ ವಜಾಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.