ಇ-ಖಾತಾ ನೆಪವೊಡ್ಡಿ ಡಿಕ್ರಿಯಾದ ಕ್ರಯ ಪತ್ರ ನೋಂದಣಿಗೆ ನಿರಾಕರಣೆ ಒಪ್ಪಿತವಲ್ಲ- ಹೈಕೋರ್ಟ್ ಚಾಟಿ
ಬೆಂಗಳೂರು: ಇ-ಖಾತಾವಾಗಿಲ್ಲ ಎಂಬ ನೆಪವೊಡ್ಡಿ ನ್ಯಾಯಾಲಯದಿಂದ ಡಿಕ್ರಿಯಾದ ಕ್ರಯ ಪತ್ರ ನೋಂದಣಿಯನ್ನು ನಿರಾಕರಿಸುವ ನಿರ್ಧಾರ ಒಪ್ಪಿತವಲ್ಲ ಹೈಕೋರ್ಟ್ ಚಾಟಿ ಬೀಸಿದ್ದು ಈ ಸಂಬಂಧ ಮಾರ್ಗಸೂಚಿ ರೂಪಿಸಿದೆ.
ವಿಚಾರಣಾಧೀನ ನ್ಯಾಯಾಲಯದ ಡಿಕ್ರಿಯ ಹೊರತಾಗಿಯೂ ಇ-ಖಾತಾ ಇಲ್ಲ ಎಂದು ನೋಂದಣಿ ಮಾಡಲು ತುಮಕೂರು ಜಿಲ್ಲೆಯ ನೋಂದಣಾಧಿಕಾರಿ ತಿರಸ್ಕರಿಸಿ 28.08.2025ರಂದು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ತುಮಕೂರಿನ ಪಿ ಎಸ್ ಅಶೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು, ನ್ಯಾಯಾಲಯದ ಡಿಕ್ರಿ ಆದೇಶದ ಹೊರತಾಗಿಯೂ ಆಸ್ತಿಯ ಇ-ಖಾತಾ ಇಲ್ಲದಿರುವುದನ್ನು ಮುಂದು ಮಾಡಿ ಕ್ರಯಪತ್ರ ನೋಂದಣಿ ನಿರಾಕರಿಸಲಾಗದು ಎಂದು ಆದೇಶಿಸಿತು.
ಇ-ಖಾತಾ ಇಲ್ಲ ಎಂದು ಕ್ರಯ ಪತ್ರ ನೋಂದಣಿ ಮಾಡಲು ನಿರಾಕರಿಸಿರುವ ಸರ್ಕಾರದ ಪ್ರಾಧಿಕಾರ ನಿರ್ಧಾರ ಒಪ್ಪಿತವಲ್ಲ. ಕಾನೂನು ಮತ್ತು ಡಿಕ್ರಿ ಆದೇಶಗಳ ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದ ಮೊದಲ ತತ್ವಕ್ಕೆ ಇದು ವಿರುದ್ಧವಾಗಿದೆ. ಈ ಪರಿಸ್ಥಿತಿಯು ಪದೇಪದೇ ನ್ಯಾಯಾಲಯದ ಮುಂದೆ ಬರುತ್ತಿದ್ದು, ಸಾಂಸ್ಥಿಕ ಅಸಹಜತೆಯಾಗಿದೆ. ಇದು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸಮಸ್ಯೆಯಾಗಿದ್ದು, ನ್ಯಾಯಾಲಯದ ಆದೇಶ ಪಾಲಿಸುವುದಕ್ಕೆ ಬದಲಾಗಿ ಡಿಕ್ರಿ ಆದೇಶ ಜಾರಿಗೊಳಿಸಲು ಅಸಾಧ್ಯವಾದ ಸನ್ನಿವೇಶವನ್ನು ನಿರ್ಮಿಸಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
“ಒಮ್ಮೆ ನ್ಯಾಯಾಲಯದಲ್ಲಿ ಡಿಕ್ರಿಯಾದರೆ ಅದು ಹಕ್ಕಿನ ಘೋಷಣೆ ಮಾತ್ರವಲ್ಲ ಕಾನೂನಿನ ಅಡಿ ಕಾರ್ಯಗತಗೊಳಿಸಬೇಕಾದ ಸಂದೇಶವಾಗಿದೆ. ನ್ಯಾಯಾಲಯದ ಆಯುಕ್ತರನ್ನು ನೇಮಿಸುವುದೂ ಸೇರಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಡಿಕ್ರಿಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವಂಥ ಅಸಾಧ್ಯವಾದ ಅಧಿಕಾರ ನೀಡಲಾಗಿದೆ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.
ಸಾಂಸ್ಥಿಕ ಕೊರತೆಗಳನ್ನು ಸರಿದೂಗಿಸುವ ಸಂಬಂಧ ನ್ಯಾಯಾಲಯದ ಡಿಕ್ರಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವಿಚಾರಣಾಧೀನ ನ್ಯಾಯಾಲಯ (ಎಕ್ಸಿಕ್ಯೂಟಿಂಗ್ ಕೋರ್ಟ್), ಸ್ಥಳೀಯ ಸಂಸ್ಥೆಗಳು ಮತ್ತು ಇತರೆ ನೋಂದಣಿ ಪ್ರಾಧಿಕಾರಗಳು ಪಾಲಿಸಲೇಬೇಕಾದ ಕೆಲವು ಮಾರ್ಗಸೂಚಿಗಳನ್ನು ನ್ಯಾಯಪೀಠ ರೂಪಿಸಿದ್ದು ಅವು ಈ ಕೆಳಕಂಡಂತಿದೆ.
ನ್ಯಾಯಾಲಯದಿಂದ ಅಂತಿಮ ಡಿಕ್ರಿಯಾದ ಬಳಿಕ ತೀರ್ಪಿನ ಸಾಲಗಾರರು (ಜಡ್ಜ್ಮೆಂಟ್ ಡೆಬ್ಟರ್) ಕ್ರಯ ಪತ್ರ ನೋಂದಣಿ ಮಾಡಿಸಲು ವಿಫಲವಾದರೆ ವಿಚಾರಣಾಧೀನ ನ್ಯಾಯಾಲಯವು ತೀರ್ಪಿನ ಸಾಲಗಾರರ ಪರವಾಗಿ ಕ್ರಯಪತ್ರ ನೋಂದಾಯಿಸಲು ನ್ಯಾಯಾಲಯದ ಆಯುಕ್ತರನ್ನು ನೇಮಿಸುವ ಸ್ವಾತಂತ್ರ್ಯ ಹೊಂದಿದೆ.
ಮೂಲ ಮಾಲೀಕರು/ತೀರ್ಪು ಸಾಲಗಾರರು ಅರ್ಜಿ ಸಲ್ಲಿಸಿಲ್ಲ ಎಂದು ಸಕ್ಷಮ ಸ್ಥಳೀಯಾಡಳಿತವು ಇ-ಖಾತಾ ನೀಡದೇ ಇರುವಂತಿಲ್ಲ. ಅಂಥ ಪ್ರಕರಣಗಳಲ್ಲಿ ಮೂಲ ಮಾಲೀಕರು/ತೀರ್ಪು ಸಾಲಗಾರರ ಹೆಸರಿನಲ್ಲಿ ಇ-ಖಾತಾ ನೀಡಬಹುದು ಅಥವಾ ತೀರ್ಪು ಸಾಲಗಾರರನ್ನು ಪ್ರತಿನಿಧಿಸಿರುವ ನ್ಯಾಯಾಲಯದ ಆಯುಕ್ತರ ಹೆಸರಿನಲ್ಲಿ ಆದೇಶ ಕಾರ್ಯಗತಗೊಳಿಸಲು ಇ-ಖಾತಾ ನೀಡಬಹುದು.
ಸಂಬಂಧಿತ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಅಥವಾ ಶಾಸನಬದ್ಧ ಬಾಕಿ ಇದ್ದರೆ ಅದನ್ನು ಡಿಕ್ರಿ ಪಡೆದುಕೊಂಡಿರುವವರಿಂದ ವಸೂಲು ಮಾಡಬೇಕೆ ವಿನಾ ತೀರ್ಪಿನ ಸಾಲಗಾರರಿಗೆ ಅದನ್ನು ಪಾವತಿಸಲು ನಿರ್ದೇಶಿಸುವಂತಿಲ್ಲ.
ಆಕ್ಷೇಪಾರ್ಹವಾದ ಸ್ವತ್ತಿನ ನೋಂದಣಿಗೆ ಇ-ಖಾತಾ ಅಗತ್ಯ ಎಂಬುದು ಪೂರ್ವ ಷರತ್ತಾದಲ್ಲಿ ವಿಚಾರಣಾಧೀನ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅಥವಾ ಡಿಕ್ರಿ ಹೊಂದಿರುವವರ ಅರ್ಜಿ ಆಧರಿಸಿ ಸಕ್ಷಮ ಸ್ಥಳೀಯಾಡಳಿತಕ್ಕೆ ಡಿಕ್ರಿ ಕಾರ್ಯಗತಗೊಳಿಸಲು ಸೀಮಿತವಾಗಿ ಇ-ಖಾತಾ ನೀಡಲು ನಿರ್ದೇಶಿಸಬಹುದು.
ಡಿಕ್ರಿ ಹೊಂದಿರುವವರು ಬಾಕಿ ಪಾವತಿಸಿದ ಬಳಿಕ ಇ-ಖಾತಾವನ್ನು ಅರ್ಜಿ ಸಲ್ಲಿಸಿದ ಎರಡು ತಿಂಗಳಲ್ಲಿ ಒದಗಿಸಬೇಕು. ಬಾಕಿ ಪಾವತಿಸಿದ ಮೊತ್ತವು ಗಣನೀಯವಾಗಿದ್ದಾಗ ಡಿಕ್ರಿ ಆದೇಶ ಪಡೆದಿರುವ ವ್ಯಕ್ತಿಯು ಸೂಕ್ತ ಪ್ರಕ್ರಿಯೆಯ ಮೂಲಕ ತೀರ್ಪಿನ ಸಾಲಗಾರರ ಕಡೆಯಿಂದ ಅದನ್ನು ವಸೂಲಿ ಮಾಡಿಕೊಳ್ಳಬಹುದು. ಇ-ಖಾತಾ ಒದಗಿಸಿದ ಮೇಲೆ ಉಪ ನೋಂದಣಾಧಿಕಾರಿಯು ನ್ಯಾಯಾಲಯದ ಆಯುಕ್ತರು ಮಾಡಲು ಮುಂದಾಗುವ ಕ್ರಯ ಪತ್ರ ನೋಂದಾಯಿಸಲು ನಿರಾಕರಿಸುವಂತಿಲ್ಲ.
ತೀರ್ಪಿನ ಸಾಲಗಾರರು ಮಾಡಿಕೊಡುವಾಗ ಪರಿಗಣಿಸುವಂತೆಯೇ ವಿಚಾರಣಾಧೀನ ನ್ಯಾಯಾಲಯದ ಆದೇಶದ ಪ್ರಕಾರ ನ್ಯಾಯಾಲಯದ ಆಯುಕ್ತರು ಮಾಡಿಕೊಡಲು ಮುಂದಾಗುವ ಕ್ರಯ ಪತ್ರವನ್ನು ಪರಿಗಣಿಸಬೇಕು. ತೀರ್ಪಿನ ಸಾಲಗಾರರ ಖುದ್ದು ಹಾಜರಾತಿ ಅಥವಾ ಒಪ್ಪಿಗೆಗೆ ಆಗ್ರಹಿಸಬಾರದು.
ತಮ್ಮ ಪಾತ್ರವು ಡಿಕ್ರಿ ಕಾರ್ಯಗತಗೊಳಿಸುವುದಕ್ಕೆ ಅನುಗುಣವಾಗಿ ನಡೆಯುವುದೆ ವಿನಾ ಕಾನೂನು ಪ್ರಕಾರ ನಿರ್ಧಾರವಾಗಿರುವುದನ್ನು ನಿಷ್ಪಲಗೊಳಿಸುವುದಲ್ಲ ಎಂಬುದನ್ನು ಎಲ್ಲಾ ಪ್ರಾಧಿಕಾರಗಳು ಗಮನದಲ್ಲಿಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
