18/05/2026

Law Guide Kannada

Online Guide

ಬೇನಾಮಿ ವ್ಯಕ್ತಿಗೆ ಆಸ್ತಿಯ ಮಾಲೀಕತ್ವ ದೊರೆಕಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಬೇನಾಮಿ ವ್ಯಕ್ತಿಗೆ ಆಸ್ತಿಯ ಮಾಲೀಕತ್ವ ದೊರೆಕಲು ಸಾಧ್ಯವಿಲ್ಲ. ಕೇವಲ ಮಾಲೀಕರು ಬರೆದಿರುವ ವಿಲ್ ಆಧಾರದ ಮೇಲೆ ಯಾವುದೇ ವ್ಯಕ್ತಿ ಬೇನಾಮಿ ವಹಿವಾಟಿನಲ್ಲಿ ಖರೀದಿಸಿದ ಆಸ್ತಿಯ ಮಾಲೀಕರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರಿನ ಉದ್ಯಮಿ ಕೆ. ರಘುನಾಥ್ ಎಂಬುವರ ಹೆಸರಿನಲ್ಲಿ ಖರೀದಿಸಿದ ಆಸ್ತಿಯ ಮಾಲೀಕತ್ವ ವಿವಾದಕ್ಕೆ ಸಂಬಂಧಪಟ್ಟ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ತೀರ್ಪು ಪ್ರಕಟಿಸಿದೆ.

ಇದರಲ್ಲಿ ಕೆ. ರಘುನಾಥ್ ಅವರು ತಮ್ಮ ವಿಲ್ ನಲ್ಲಿ ವಿವಾದಿತ ಆಸ್ತಿಯನ್ನು ಬೇನಾಮಿ ವ್ಯಕ್ತಿಯ ಹೆಸರಿಗೆ ಬರೆದಿದ್ದರು. ಅವರ ಮರಣದ ನಂತರ ಇದನ್ನು ಅವರ ಪತ್ನಿ ಮತ್ತು ಮಕ್ಕಳು ಪ್ರಶ್ನಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ವಾಣಿಜ್ಯ ಒಪ್ಪಂದದಡಿಯಲ್ಲಿ ಬೇರೊಬ್ಬ ವ್ಯಕ್ತಿ ಒದಗಿಸಿದ ನಿಧಿಯಿಂದ ಖರೀದಿಸಿದ ಆಸ್ತಿಗಳು ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ- 1988 ಅಡಿಯಲ್ಲಿ ವಿನಾಯಿತಿ ಪಡೆಯಲು ಅರ್ಹವಾಗುವುದಿಲ್ಲ. ಕೇಂದ್ರ ಸರ್ಕಾರ ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದಿದೆ.

ಆದರೆ ಈ ಭೂಮಿಯನ್ನು ತಮ್ಮ ಹಣದಿಂದ ಖರೀದಿಸಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿಯಲ್ಲಿ ತಮಗೆ ಭೂಮಿ ಖರೀದಿಗೆ ಅವಕಾಶ ಇಲ್ಲದ ಕಾರಣ, ಬೇನಾಮಿ ಹೆಸರಿನಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದೇನೆ. ಅದನ್ನು ರಘುನಾಥ್ 2018ರ ಏಪ್ರಿಲ್ 20ರಂದು ನೋಂದಣಿ ಮಾಡಿಸಿರುವ ತಮ್ಮ ವಿಲ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ದೂರುದಾರರು ವಾದಿಸಿದ್ದಾರೆ.

ತಮಗೆ ಮತ್ತು ಮೃತ ವ್ಯಕ್ತಿಯ ನಡುವೆ ಉದ್ಯೋಗಿ-ಉದ್ಯೋಗದಾತರ ಸಂಬಂಧವಿತ್ತು. ಅದ್ದರಿಂದ ಇದು ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಿಂದ ವಿನಾಯಿತಿ ಪಡೆಯುತ್ತದೆ. ಈ ವ್ಯಾಜ್ಯವು ವಿಲ್ ಗೆ ಸಂಬಂಧಪಟ್ಟಿದ್ದಾಗಿದೆ. ಬೇನಾಮಿ ವಹಿವಾಟಿನ ಕುರಿತಲ್ಲ ಎಂದು ಅವರು ವಾದಿಸಿದ್ದರು.

ಅಧೀನ ನ್ಯಾಯಾಲವು ಸಿಪಿಸಿ ಅರ್ಜಿಯ 11ನೇ ನಿಯಮದ 7ನೇ ಆದೇಶದ ಅನುಸಾರ ಈ ಭೂಮಿಯ ಮಾಲೀಕತ್ವ ಹಸ್ತಾಂತರವನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಕೂಡ ತಮ್ಮ ಪರ ತೀರ್ಪು ಬಾರದ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿವರ..
ರಘುನಾಥ್ ಮತ್ತು ಆದಿಕೇಶವುಲು ಅವರ ಆಪ್ತರಾಗಿದ್ದರು. 2019ರ ಮೇ 4ರಂದು ರಘುನಾಥ್ ನೇಣುಬಿಗಿದ ಸ್ಥಿತಿಯಲ್ಲಿ ಆದಿಕೇಶವುಲು ಅವರಿಗೆ ಸೇರಿದ ಅತಿಥಿ ಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಆತ್ಮಹತ್ಯೆ ಎಂದು ಪ್ರಕರಣ ಮುಕ್ತಾಯಗೊಳಿಸಲಾಗಿತ್ತು. ಆದರೆ, 2020ರ ಫೆ.15ರಂದು ರಘುನಾಥ್ ಪತ್ನಿ ಇದು ಕೊಲೆ ಎಂದು ಶಂಕಿಸಿ ದೂರು ನೀಡಲು ಮುಂದಾಗಿದ್ದರು. ದೂರು ಸ್ವೀಕರಿಸದಿದ್ದಾಗ ಖಾಸಗಿ ದೂರು ಸಲ್ಲಿಸಿದ್ದರು. ರಘುನಾಥ್ 2016ರಲ್ಲಿ ಪತ್ನಿ ಮಂಜುಳಾ ಹೆಸರಿಗೆ ವಿಲ್ ಬರೆದಿದ್ದರು.

‘ರಘುನಾಥ್ ಅವರು ಮೃತಪಟ್ಟ ನಂತರ ಡಿ.ಎ ಶ್ರೀನಿವಾಸ್ ಅವರು, ನಕಲಿ ಛಾಪಾ ಕಾಗದ ಬಳಸಿದ್ದರು. ಬಳಿಕ ರಘುನಾಥ್ ಹೆಸರಿನಲ್ಲಿ ನಕಲಿ ವಿಲ್ ತಯಾರಿಸಿ ಅವರ ಬಳಿ ಇರುವ ಆಸ್ತಿ ತಮಗೆ ಸೇರಬೇಕು ಎಂದು ಪ್ರತಿಪಾದಿಸಿದ್ದರು. ವಿಲ್ ನೋಂದಣಿ ಮಾಡಿ ಆಸ್ತಿ ವಶಕ್ಕೆ ಮುಂದಾಗಿದ್ದರು’ ಎಂದು ಆರೋಪಿಸಲಾಗಿತ್ತು.

ಕೆ.ರಘುನಾಥ್ ಅವರ ಅನುಮಾನಾಸ್ಪದ ಸಾವು ಹಾಗೂ ನಕಲಿ ದಾಖಲೆ ಸೃಷ್ಟಿಸಲಾಗಿತ್ತು ಎಂದು ಆರೋಪಿಸಲಾದ ಪ್ರಕರಣದಲ್ಲಿ ಉದ್ಯಮಿ ಡಿ.ಕೆ. ಆದಿಕೇಶವುಲು ಪುತ್ರ ಡಿ.ಎ ಶ್ರೀನಿವಾಸ್, ಪುತ್ರಿ ಡಿ.ಎ.ಕಲ್ಪಜಾ, ಡಿವೈಎಸ್ಪಿ ಎಸ್.ವೈ.ಮೋಹನ್ ಅವರನ್ನು ಸಿಬಿಐ ಪೊಲೀಸರು 2025ರ ಡಿಸೆಂಬರ್ ನಲ್ಲಿ ಬಂಧಿಸಿದ್ದರು. ವಂಚನೆ, ನಕಲಿ ದಾಖಲೆ ಸೃಷ್ಟಿ, ಛಾಪಾಕಾಗದ ಹಾಗೂ ಮೊಹರುಗಳ ನಕಲು, ಸಾಕ್ಷ್ಯನಾಶ ಹಾಗೂ ನಕಲಿ ಸಾಕ್ಷ್ಯ ಸೃಷ್ಟಿ ಕುರಿತ ಪ್ರಕರಣಗಳಿಗೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಿದೆ. ನಕಲಿ ದಾಖಲೆ ಹಾಗೂ ಕೆ.ರಘುನಾಥ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದ ಅನ್ವಯ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿಂದೆ ಇದೇ ಪ್ರಕರಣವನ್ನು ಕರ್ನಾಟಕದ ಪೊಲೀಸರು ತನಿಖೆ ನಡೆಸಿದ್ದರು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.