ಸರ್ಕಾರಿ ನೌಕರರ ಸೇವಾ ಸಂಘಗಳ ಕಾರ್ಯ ವೈಖರಿ ನಿಯಂತ್ರಣ: ಮಹತ್ವದ ತಿದ್ದುಪಡಿ ನಿಯಮಗಳು ಜಾರಿ
ಬೆಂಗಳೂರು: ಸರ್ಕಾರಿ ನೌಕರರ ಸೇವಾ ಸಂಘಗಳಿಗೆ ನೌಕರರ ಸಂಘಟನೆಗಳ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಹೊಸ ತಿದ್ದುಪಡಿ ನಿಯಮಗಳನ್ನು ಜಾರಿ ಮಾಡಿದೆ.
ಹೌದು ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ ಸೇವಾ ಸಂಘಗಳು ಹಾಗೂ ನೌಕರರ ಸಂಘಟನೆಗಳ ಕಾರ್ಯವೈಖರಿಯನ್ನು ನಿಯಂತ್ರಿಸುವ ಉದ್ದೇಶದಿಂದ ಮಹತ್ವದ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದ್ದು ಇದರ ಉದ್ದೇಶ, ಪರಿಣಾಮಗಳ ಸಮಗ್ರ ವಿಶ್ಲೇಷಣೆಯ ಹಿನ್ನೋಟ ಹೀಗಿದೆ ನೋಡಿ..
ಕರ್ನಾಟಕ ನಾಗರಿಕ ಸೇವೆಗಳು (ಸೇವಾ ಸಂಘಗಳ ಮಾನ್ಯತೆ) (ತಿದ್ದುಪಡಿ) ನಿಯಮಗಳು, 2026″ ಎಂಬ ಹೆಸರಿನ ಈ ಅಧಿನಿಯಮ 16.05.2026ರಂದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದ್ದು, ಪ್ರಕಟಣೆಗೊಂಡ ದಿನಾಂಕದಿಂದಲೇ ಈ ನಿಯಮಗಳು ಜಾರಿಗೆ ಬಂದಿದೆ. ಈ ತಿದ್ದುಪಡಿಯ ಮೂಲಕ ಸರ್ಕಾರವು ಸ್ಪಷ್ಟವಾಗಿ “ಸೇವಾ ಸಂಘಗಳು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು” ಎಂದು ನಿಯಮಬದ್ಧ ನಿರ್ಬಂಧ ವಿಧಿಸಿದೆ. ಇದು ಸರ್ಕಾರಿ ನೌಕರರ ಸಂಘಗಳ ಕಾರ್ಯಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿರುವ ನಿರ್ಣಾಯಕ ಹೆಜ್ಜೆಯಾಗಿದೆ.
ಕರ್ನಾಟಕ ನಾಗರಿಕ ಸೇವೆಗಳ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015ರ ನಿಯಮ 4ಕ್ಕೆ ಹೊಸದಾಗಿ ಖಂಡ (17) ಸೇರಿಸುವ ಮೂಲಕ ಈ ತಿದ್ದುಪಡಿ ಮಾಡಲಾಗಿದ್ದು ಅದರ ಪ್ರಕಾರ “ಒಂದು ಸೇವಾ ಸಂಘವು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದಲ್ಲ. ಆದರೆ, ಈ ನಿಯಮಕ್ಕೆ ಸರ್ಕಾರವು ಒಂದು ಮಹತ್ವದ ವಿವರಣೆಯನ್ನೂ ನೀಡಿದ್ದು ಅದರಂತೆ ಯಾವುದೇ ಲಾಭದ ಉದ್ದೇಶ ಅಥವಾ ಆರ್ಥಿಕ ಲಾಭವಿಲ್ಲದೆ, ತನ್ನ ಸದಸ್ಯರ ಕಲ್ಯಾಣಕ್ಕಾಗಿ ಕೈಗೊಳ್ಳುವ ಚಟುವಟಿಕೆಗಳನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ, ಸಂಘಗಳು ಸದಸ್ಯರ ಹಿತಾಸಕ್ತಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ ಲಾಭ ಗಳಿಸುವ ಉದ್ದೇಶದಿಂದ ವ್ಯಾಪಾರ ಚಟುವಟಿಕೆ ನಡೆಸುವುದು ನಿಷಿದ್ಧವಾಗಿದೆ.
ಸರ್ಕಾರವು ಈ ತಿದ್ದುಪಡಿಯ ಮೂಲಕ ಸೇವಾ ಸಂಘಗಳು ತಮ್ಮ ಮೂಲ ಉದ್ದೇಶದಿಂದ ವಿಚಲಿತರಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಸರ್ಕಾರಿ ನೌಕರರ ಹಿತಾಸಕ್ತಿ ರಕ್ಷಣೆ, ಸೇವಾ ಸಮಸ್ಯೆಗಳ ಪರಿಹಾರ, ನೌಕರರ ಕಲ್ಯಾಣ, ಆಡಳಿತದೊಂದಿಗೆ ಸಮನ್ವಯ, ವೃತ್ತಿಪರ ಏಕತೆ ಮತ್ತು ಪ್ರತಿನಿಧಿತ್ವ ಇವುಗಳು ಸೇವಾ ಸಂಘಗಳ ಮುಖ್ಯ ಉದ್ದೇಶಗಳಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವು ಸಂಘಗಳು ಸರ್ಕಾರದಿಂದ ಹಂಚಿಕೆಗೊಂಡ ಭೂಮಿ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಅಂಗಡಿಗಳ ಬಾಡಿಗೆ, ಮನರಂಜನಾ ಕ್ಲಬ್ ಗಳ ನಿರ್ವಹಣೆ, ಸಾರ್ವಜನಿಕರಿಗೆ ಪಾವತಿಸಿದ ಸೇವೆಗಳು ಮುಂತಾದ ಚಟುವಟಿಕೆಗಳಲ್ಲಿ ತೊಡಗಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಸೇವಾ ಸಂಘಗಳ ಮೂಲ ಸ್ವಭಾವ ಮತ್ತು ಗುರಿಯನ್ನು ಕಾಪಾಡುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳ ಪ್ರಕಾರ ಕೆಳಕಂಡ ಚಟುವಟಿಕೆಗಳು ವಾಣಿಜ್ಯ ಚಟುವಟಿಕೆಗಳಾಗಿ ಪರಿಗಣಿಸಲ್ಪಡುವ ಸಾಧ್ಯತೆ ಇದೆ. ಅಂಗಡಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಕಟ್ಟಡ ಬಾಡಿಗೆ ನೀಡುವುದು. ಲಾಭದ ಉದ್ದೇಶದಿಂದ ವಾಣಿಜ್ಯ ಸಂಕೀರ್ಣ ನಿರ್ಮಾಣ, ಸಾರ್ವಜನಿಕರಿಗೆ ಶುಲ್ಕ ಪಡೆದು ಮನರಂಜನಾ ಕೇಂದ್ರ ನಡೆಸುವುದು. ವ್ಯಾಪಾರಿಕ ಸಭಾಂಗಣಗಳ ನಿರ್ವಹಣೆ, ಲಾಭ ಆಧಾರಿತ ವ್ಯವಹಾರಗಳಲ್ಲಿ ನೇರ ಹೂಡಿಕೆ ಇತ್ಯಾದಿ.
ತಿದ್ದುಪಡಿಯ ನಿಯಮಗಳನ್ನು ಉಲ್ಲಂಘಿಸುವ ಸೇವಾ ಸಂಘಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದಾಗಿದೆ. ಸಂಘದ ಮಾನ್ಯತೆ ಹಿಂಪಡೆಯಬಹುದು, ಆಡಳಿತದೊಂದಿಗೆ ಮಾತುಕತೆ ನಡೆಸುವ ಹಕ್ಕು ಕಳೆದುಕೊಳ್ಳಬಹುದು, ಸರ್ಕಾರದ ಸೌಲಭ್ಯಗಳನ್ನು ರದ್ದು ಪಡಿಸಬಹುದು, ಭೂ ಹಂಚಿಕೆ ಅಥವಾ ಕಟ್ಟಡ ಬಳಕೆಯನ್ನು ಮರುಪರಿಶೀಲಿಸಬಹುದು. ಇದರಿಂದ ಸಂಘಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗುವ ಸಾಧ್ಯತೆ ಇದೆ.
ಈ ತಿದ್ದುಪಡಿ ನಿಯಮಗಳಿಂದಾಗುವ ಕಾನೂನುಪರ, ಆಡಳಿತಾತ್ಮಕ ಪರಿಣಾಮಗಳೇನು?
ಈ ತಿದ್ದುಪಡಿ ನಿಯಮಗಳ ಜಾರಿಯಿಂದಾಗಿ ಮುಂದಿನ ದಿನಗಳಲ್ಲಿ ಅನೇಕ ಸಂಘಗಳ ಕಾರ್ಯವೈಖರಿಯಲ್ಲಿ ಬದಲಾವಣೆ ತರಬಹುದಾಗಿದೆ. ಈಗಾಗಲೇ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಗಳು ತಮ್ಮ ಚಟುವಟಿಕೆಗಳನ್ನು ಮರುಪರಿಶೀಲಿಸಬೇಕಾಗಬಹುದು, ವಾಣಿಜ್ಯ ಘಟಕಗಳನ್ನು ಮುಚ್ಚಬೇಕಾಗಬಹುದು, ಲಾಭರಹಿತ ಮಾದರಿಯತ್ತ ಮರಳಬೇಕಾಗಬಹುದು. ಇದೇ ವೇಳೆ, ಸರ್ಕಾರ ಮತ್ತು ಸಂಘಗಳ ನಡುವಿನ ಸಂಬಂಧಗಳಲ್ಲಿ ಹೊಸ ನಿಯಂತ್ರಣಾತ್ಮಕ ಚೌಕಟ್ಟು ರೂಪುಗೊಳ್ಳುವ ಸಾಧ್ಯತೆಯೂ ಇದೆ.
ಈ ತಿದ್ದುಪಡಿ ಅಧಿನಿಯಮಗಳ ಮುಖ್ಯ ಉದ್ದೇಶ ಸರ್ಕಾರಿ ನೌಕರರ ಸೇವಾ ಸಂಘಗಳು ಲಾಭದಾಯಕ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯುವುದು ಮತ್ತು ಅವುಗಳ ಮೂಲ ಉದ್ದೇಶವಾದ ನೌಕರರ ಕಲ್ಯಾಣವನ್ನು ಕಾಪಾಡುವುದು. ಸೇವಾ ಸಂಘಗಳು ಸದಸ್ಯರ ಕಲ್ಯಾಣಕ್ಕಾಗಿ, ಲಾಭರಹಿತ ಉದ್ದೇಶದಿಂದ ನಡೆಸುವ ಚಟುವಟಿಕೆಗಳಿಗೆ ಅವಕಾಶ ಇದೆ. ಆದರೆ ವ್ಯಾಪಾರ ಅಥವಾ ಲಾಭ ಗಳಿಸುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ರಾಜ್ಯ ಸರ್ಕಾರವು ಸಂಘದ ಮಾನ್ಯತೆಯನ್ನು ಹಿಂಪಡೆಯಬಹುದು ಹಾಗೂ ಇತರೆ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
