09/06/2026

Law Guide Kannada

Online Guide

ಕೃತಕ ಬುದ್ಧಿಮತ್ತೆ ಆಧಾರಿತ, ನಕಲಿ ತೀರ್ಪುಗಳಿಗೆ ವಕೀಲರೇ ಹೊಣೆ: BCI ವಾರ್ನಿಂಗ್

ನವದೆಹಲಿ: ಕೃತಕ ಬುದ್ಧಿಮತ್ತೆ ಆಧಾರಿತ, ನಕಲಿ ತೀರ್ಪುಗಳಿಗೆ ವಕೀಲರೇ ಹೊಣೆಗಾರರಾಗಿರುತ್ತಾರೆ. ತಂತ್ರಜ್ಞಾನದ ನೆಪ ಬೇಡ, ಇದು ವಕೀಲರ ವೃತಿಪರ ದುರ್ನಡತೆಯಾಗಿದ್ದು ಇಂತಹ ವಕೀಲರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಾರ್ ಕೌನ್ಸಿಲ್ ಆಪ್ ಇಂಡಿಯಾ ಎಚ್ಚರಿಕೆ ನೀಡಿದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ತೀರ್ಪುಗಳು ಮತ್ತು ಕಾನೂನು ದಾಖಲೆಗಳ ಸಲ್ಲಿಕೆಯ ವಿಚಾರವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ತೀರ್ಪುಗಳು ಮತ್ತು ನಕಲಿ ತೀರ್ಪುಗಳು ಮತ್ತು ತಪ್ಪು ವಾದಗಳಿಗೆ ಅದನ್ನು ಪ್ರಸ್ತುತಪಡಿಸಿದ ವಕೀಲರೇ ಹೊಣೆಯಾಗಿದ್ದಾರೆ. ತಂತ್ರಜ್ಞಾನದ ದೋಷ ಎಂದು ನೆಪವೊಡ್ಡಿ ವಕೀಲರು ತಮ್ಮ ವೃತ್ತಿಪರ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಬಿಸಿಐ ಸ್ಪಷ್ಟಪಡಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳು ಹೀಗಿವೆ
ಕೆಲವು ಕೆಳ ನ್ಯಾಯಾಲಯಗಳು ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ನಕಲಿ ತೀರ್ಪುಗಳನ್ನು ಪರಿಗಣಿಸಿ ಆದೇಶಗಳನ್ನು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯದ ಪ್ರಕ್ರಿಯೆಗಳ ಸಮಗ್ರತೆಗೆ ಧಕ್ಕೆ ಬರುವ ಇಂತಹ ಪ್ರಕರಣಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಸೂಚನೆ ನೀಡಿದೆ.

ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಸುಳ್ಳು ಉಲ್ಲೇಖಗಳು ಅಥವಾ ನಕಲಿ ತೀರ್ಪುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ, ಅದನ್ನು ಕೇವಲ ಯಾಂತ್ರಿಕ ದೋಷ ಎಂದು ಪರಿಗಣಿಸಲಾಗುವುದಿಲ್ಲ. ಅಡೋ ಕೇಟ್ಸ್ ಆಕ್ಟ್, 1961 ರ (Advocates Act) ಸೆಕ್ಷನ್ 35 ಮತ್ತು 36 ರ ಅಡಿಯಲ್ಲಿ ಅಂತಹ ವಕೀಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

ವಕೀಲರು ತಮ್ಮ ಕಾನೂನು ಸಂಶೋಧನೆ ಮತ್ತು ಕರಡು ರಚನೆಗೆ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಬಹುದಾದರೂ, ಪ್ರತಿಯೊಂದು ಉಲ್ಲೇಖ (Citation), ಪ್ರಕರಣದ ವಿವರ ಮತ್ತು ಅಂಶಗಳನ್ನು ಖುದ್ದಾಗಿ ಪರಿಶೀಲಿಸುವುದು ಕಡ್ಡಾಯವಾಗಿದೆ.

ವಕೀಲರು ತಮ್ಮ ಕಕ್ಷಿದಾರರಿಗೆ ವೃತ್ತಿಪರ ಗೌಪ್ಯತೆಯನ್ನು ಕಾಪಾಡಬೇಕಾದ ಕರ್ತವ್ಯವನ್ನು ಹೊಂದಿರುತ್ತಾರೆ. ಕಕ್ಷಿದಾರರ ಸೂಕ್ಷ್ಮ ಮಾಹಿತಿ, ಕಾನೂನು ತಂತ್ರಗಳು ಅಥವಾ ಖಾಸಗಿ ಸಂವಹನಗಳನ್ನು ಸುರಕ್ಷಿತವಲ್ಲದ ಪಬ್ಲಿಕ್ ಂI ಪ್ಲಾಟ್ ಫಾರ್ಮ್ಗಳಿಗೆ ಅಪ್ ಲೋಡ್ ಮಾಡುವುದರ ವಿರುದ್ಧ ಬಾರ್ ಕೌನ್ಸಿಲ್ ಎಚ್ಚರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.