09/06/2026

Law Guide Kannada

Online Guide

ಸಿಮ್ ಸ್ಟಾಪ್ ವಂಚನೆ: ಟೆಲಿಕಾಂ ಕಂಪೆನಿಗಳೇ ಸಂಪೂರ್ಣ ಹೊಣೆ – ಪರಿಹಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಡಿಜಿಟಲ್ ಹಣಕಾಸು ವಹಿವಾಟಿನ ಇಂದಿನ ಯುಗದಲ್ಲಿ ಸಿಮ್ ಸ್ಟಾಪ್ ವಂಚನೆಗೆ ನಕಲಿ ಸಿಮ್ ಕೊಡುವ ಟೆಲಿಕಾಂ ಕಂಪೆನಿಗಳೇ ಸಂಪೂರ್ಣ ಹೊಣೆಯಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ನಿರ್ಲಕ್ಷ್ಯದಿಂದ ನಕಲಿ ಸಿಮ್ ಗಳನ್ನು ನೀಡುವ ಮೂಲಕ ಸಿಮ್ ಸ್ಟಾಪ್ ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದಾಗುವ ಹಣದ ನಷ್ಟಕ್ಕೆ ಟೆಲಿಕಾಂ ಸೇವಾ ಸಂಸ್ಥೆಗಳೇ ನೇರ ಸಂಪೂರ್ಣ ಹೊಣೆಯಾಗಲಿವೆ ಎಂದು ಸ್ಪಷ್ಟಪಡಿಸಿದೆ.

ಬಿಎಸ್ಎನ್ಎಲ್ ಸಿಮ್ ಹೊಂದಿರುವ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಿಮ್ ಸ್ಟಾಪ್ ವಂಚನೆಯಿಂದ 2019ರಲ್ಲಿ 87 ಲಕ್ಷ ರೂ. ಕಳೆದುಕೊಂಡಿತ್ತು. ಇದು ಸಿಮ್ ನೀಡುವ ಮುನ್ನ ನಡೆಸುವ ಸೆಕ್ಯೂರಿಟಿ ಚೆಕ್ ಅಪ್ ಮಾಡುವಲ್ಲಿ ಆದ ನಿರ್ಲಕ್ಷ್ಯ. ಟೆಲಿಕಾಂ ಕಂಪೆನಿಯ ಕರ್ತವ್ಯ ಲೋಪದಿಂದ ಸಿಮ್ ವಂಚಕರ ಕೈ ಸೇರಿದೆ. ಇದಕ್ಕೆ ಟೆಲಿಕಾಂ ಕಂಪೆನಿಯೇ ಹೊಣೆ ಎಂದು ನ್ಯಾಯಪೀಠ ಹೇಳಿದೆ.

“ಡಿಜಿಟಲ್ ಹಣಕಾಸು ವಹಿವಾಟಿನ ಇಂದಿನ ಯುಗದಲ್ಲಿ, ನಕಲಿ ಸಿಮ್ ಅನ್ನು ಬದಲಾಯಿಸುವ ಅಥವಾ ನೀಡುವ ಮೊದಲು ಚಂದಾದಾರರ ಗುರುತನ್ನು ಪರಿಶೀಲಿಸುವುದು ಕೇವಲ ಖಾಲಿ ಔಪಚಾರಿಕತೆಯಲ್ಲ. ಬದಲಾಗಿ, ಅದೊಂದು ಗುರುತರ ಹೊಣೆಗಾರಿಕೆಯಾಗಿದೆ. ಟೆಲಿಕಾಂ ಕಂಪೆನಿಯಾದ ಬಿಎಸ್ಎನ್ಎಲ್ ಸೂಕ್ತ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದರೆ ಅಧಿಕೃತ ಸಿಮ್ ಬೇರೊಬ್ಬರ ಕೈ ಸೇರುತ್ತಿರಲಿಲ್ಲ. ಸೈಬರ್ ವಂಚನೆ ನಡೆಯುತ್ತಿರಲಿಲ್ಲ. ಡೂಪ್ಲಿಕೇಟ್ ಸಿಮ್ ಚಂದಾದಾರಲ್ಲದವರ ಕೈ ಸೇರಿದೆ ಎಂಬ ಅಂಶವನ್ನು ಕಂಪೆನಿ ಪರಿಶೀಲನೆ ನಡೆಸಿಲ್ಲ. ಅಥವಾ, ಅದರ ಪರಿಶೀಲನೆ ಪರಿಣಾಮಕಾರಿಯಾಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ನ್ಯಾಯಪೀಠ ತಿಳಿಸಿದರು.

ಹಾಗೆಯೇ ನಷ್ಟ ವಸೂಲಿ ಮಾಡದಿದ್ದರೆ, 50.5 ಲಕ್ಷ ರೂ. ಹಣವನ್ನು ಪರಿಹಾರವಾಗಿ ಬಿಎಸ್ಎನ್ಎಲ್ ಕಂಪನಿ ನೀಡಬೇಕು. ಸೈಬರ್ ವಂಚನೆಯಿಂದ ಆಗಿರುವ ಸಮಸ್ಯೆಗೆ ಪರಿಹಾರವಾಗಿ ಐದು ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಆದೇಶ ಹೊರಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.