29/07/2026

Law Guide Kannada

Online Guide

ಪಾನ್ ಮಸಾಲಗೆ ಸೆಸ್: ಇದು ಕೇಂದ್ರದ ಏಕಪಕ್ಷೀಯ ಕ್ರಮ: ಹೈಕೋರ್ಟ್

ಬೆಂಗಳೂರು: ‘ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ’ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ ಸೆಸ್ ವಿಧಿಸಿದ್ದ ಅಧಿಸೂಚನೆಯನ್ನ ರದ್ದುಗೊಳಿಸಿದೆ.

ಆರೋಗ್ಯ ಭದ್ರತಾ ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆ-2025ರ ಸಿಂಧುತ್ವವನ್ನು ಪ್ರಶ್ನಿಸಿ ಪಾನ್ ಮಸಾಲಾ ತಯಾರಕರಾದ ‘ಮೆಸರ್ಸ್ ಧರಿವಾಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ಮತ್ತಿತರರು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಹಾಗೆಯೇ ಸಂಸತ್ತಿಗಿರುವ ಸೆಸ್ ವಿಧಿಸುವ ಅಧಿಕಾರವನ್ನು ಎತ್ತಿಹಿಡಿದಿದೆ.

ತೆರಿಗೆ, ಸರ್ಚಾರ್ಜ್ (ಹೆಚ್ಚುವರಿ ಶುಲ್ಕ) ಅಥವಾ ಸೆಸ್ (ಉಪ-ತೆರಿಗೆ) ವಿಧಿಸಲು ಮತ್ತು ಇದರ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಎಲ್ಲಾ ಅಧಿಕಾರವಿದೆ. ಆದರೆ, ಈ ಪ್ರಕರಣದಲ್ಲಿ ಕಾಯ್ದೆ ಮತ್ತು ನಿಯಮಗಳಡಿ ಸೆಸ್ ವಿಧಿಸಿರುವ ವಿಧಾನವು ಅವಿವೇಕಯುತ ಮತ್ತು ಅಸ್ಪಷ್ಟತೆಯಿಂದ ಕೂಡಿದೆ. ಇದು ಉತ್ಪಾದನೆಯಾದ ವಾಸ್ತವಿಕ ಪ್ರಮಾಣದ ಬದಲಿಗೆ, ಉತ್ಪಾದನೆಯಾದ ಪ್ರಮಾಣದ ಬಗೆಗಿನ ಊಹೆಯ ಮೇಲೆ ಆಧರಿಸಿ ವಿಧಿಸಲಾದ ಸೆಸ್ ಆಗಿದೆ. ಇದು ಸಂವಿಧಾನದ 14ನೇ ವಿಧಿಯ ತತ್ವಗಳಿಗೆ ವಿರುದ್ಧವಾಗಿದೆ. ಪರಿಣಾಮ ಇದಕ್ಕೆ ಸಂಬಂಧಿಸಿದ ನಿಯಮಗಳು ಕೂಡಾ ಅಸಂವಿಧಾನಿಕ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಹೀಗಾಗಿ 2025ರ ಡಿಸೆಂಬರ್ 16 ಮತ್ತು 31 ಹಾಗೂ 2026ರ ಜನವರಿ 1 ಹಾಗೂ 30ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ರದ್ದು ಮಾಡಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.