19/06/2026

Law Guide Kannada

Online Guide

ಮರಣದಂಡನೆ ಪ್ರಕರಣಗಳಲ್ಲಿ ನೆರವು : ಹಿರಿಯ ವಕೀಲರ ವಿಶೇಷ ಕಾನೂನು ಸಮಿತಿ ರಚನೆ

ಬೆಂಗಳೂರು: ಮರಣದಂಡನೆ ಪ್ರಕರಣಗಳಲ್ಲಿ ಕಾನೂನು ನೆರವು ನೀಡಲು ಮೂವರು ಹಿರಿಯ ವಕೀಲರನ್ನೊಳಗೊಂಡ ವಿಶೇಷ ಕಾನೂನು ಸಮಿತಿಯೊಂದನ್ನು ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರವು ರಚಿಸಿದೆ.

ಮರಣದಂಡನೆ ವಿಧಿಸಲಾದ ಪ್ರಕರಣಗಳ ದೃಢೀಕರಣ ಮತ್ತು ಮೇಲ್ಮನವಿಗಳ ವಿಚಾರಣೆ ವೇಳೆ ಅಪರಾಧಿಗಳಿಗೆ ಮತ್ತು ನ್ಯಾಯಾಲಯಕ್ಕೆ ಸೂಕ್ತ ಕಾನೂನು ನೆರವು ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರವು ಪಾಲಿಸಿದ್ದು ವಿಶೇಷ ಕಾನೂನು ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಗೆ ನ್ಯಾಯವಾದಿಗಳಾದ ಅರುಣ್ ಶ್ಯಾಮ್. ವೆಂಕಟೇಶ್ ಪಿ. ದಳವಾಯಿ ಮತ್ತು ಡಿ. ನಾಗರಾಜ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಿ ಈ ಸಮಿತಿಯನ್ನು ರಚಿಸಲಾಗಿದೆ.

ಪ್ರಕರಣವೊಂದರಲ್ಲಿ ಬಿಹಾರದ ಬಕ್ಸರ್ ಜೈಲಿನಲ್ಲಿರುವ ಅಮನ್ ಸಿಂಗ್ ಮತ್ತು ಸೋನಲ್ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಮರಣದಂಡನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಪರಾಧಿಗಳ ಹಿನ್ನೆಲೆ, ಮಾನಸಿಕ ಸ್ಥಿತಿ ಹಾಗೂ ಸುಧಾರಣೆಯ ಸಾಧ್ಯತೆಗಳನ್ನು ಪರಿಶೀಲಿಸಲು ಸೂಕ್ತ ಮಾಹಿತಿ ಸಿಗುತ್ತಿಲ್ಲ. ಅಪರಾಧದ ಭೀಕರತೆಯನ್ನು ಮಾತ್ರ ಪರಿಗಣಿಸಿ ಕೇವಲ ಪ್ರತಿಕಾರದ ಧೋರಣೆಯಿಂದ ಮರಣದಂಡನೆ ವಿಧಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ತಪ್ಪು ತೀರ್ಪುಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಕೆಲವು ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಿತ್ತು. ಅದರ ಅನ್ವಯ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುವ ಮುನ್ನವೇ ಆತನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಹಾಗೂ ಸುಧಾರಣೆಯ ಸಾಧ್ಯತೆಗಳ ಬಗ್ಗೆ ವಿಚಾರಣಾ ನ್ಯಾಯಾಲಯಗಳು ಕಡ್ಡಾಯವಾಗಿ ವರದಿ ಪಡೆಯಬೇಕು. ಒಂದು ವೇಳೆ ವಿಚಾರಣಾ ನ್ಯಾಯಾಲಯಗಳು ಈ ವರದಿ ಪಡೆಯದಿದ್ದರೆ, ಹೈಕೋರ್ಟ್ಗಳು ಮರಣದಂಡನೆ ದೃಢೀಕರಣದ ಆರಂಭಿಕ ಹಂತದಲ್ಲೇ ವರದಿಯನ್ನು ತರಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಸಮನ್ವಯ ಮತ್ತು ಕಾನೂನು ನೆರವು ಅಪರಾಧಿಗಳು ಈಗಾಗಲೇ ತಮ್ಮ ಖಾಸಗಿ ವಕೀಲ ರನ್ನು ನೇಮಿಸಿಕೊಂಡಿದ್ದರೂ, ನ್ಯಾಯಾಲಯಕ್ಕೆ ಕಾನೂನು ನೆರವು ನೀಡಲು ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಯಲು ಈ ಸಮಿತಿಯು ಸಮನ್ವಯ ದಿಂದ ಕೆಲಸ ಮಾಡಲಿದೆ. ಅಪರಾಧಿಗೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡಲು ಅಥವಾ ಶಿಕ್ಷೆಯನ್ನು ಕಡಿತಗೊಳಿಸಲು ಕಾನೂನಾತ್ಮಕವಾಗಿ ಏನೆಲ್ಲ ಪೂರಕ ಅಂಶಗಳಿವೆ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.