19/06/2026

Law Guide Kannada

Online Guide

‘NI ಕಾಯ್ದೆ’: ದೂರುದಾರರಿಗೆ ಚೆಕ್ ನೀಡಿಕೆ, ವಹಿವಾಟು ಬಗ್ಗೆ ವೈಯಕ್ತಿಕ ಜ್ಞಾನ ಅವಶ್ಯಕ – ಹೈಕೋರ್ಟ್

ಕೇರಳ: ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರು ವಹಿವಾಟು, ಚೆಕ್ ನೀಡಿಕೆ ಬಗ್ಗೆ ವೈಯಕ್ತಿಕ ಜ್ಞಾನವನ್ನು ಹೊಂದುವುದು ಅತ್ಯಗತ್ಯ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

“ಶಿಜೋಶ್ ಕೆ. ವಿರುದ್ಧ ಕೇರಳ ರಾಜ್ಯ ಮತ್ತಿತರರು” ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯ ಖುಲಾಸೆ ಪ್ರಶ್ನಿಸಿ ದೂರುದಾರರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ನೆಗೋಷಿಯೇಬಲ್ ಇನ್ಸುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಮೊಕದ್ದಮೆ ಹೂಡಲು ದೂರುದಾರರು ವಹಿವಾಟು, ಚೆಕ್ ನೀಡಿಕೆ ಬಗ್ಗೆ ವೈಯಕ್ತಿಕ ಜ್ಞಾನ ಹೊಂದಿರುವುದು ಅಗತ್ಯ. ಆರೋಪಿಯು ₹4.5 ಲಕ್ಷ ಸಾಲ ಪಡೆದು ಮೊತ್ತದ ಮರುಪಾವತಿಗೆ ಚೆಕ್ ನೀಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಚೆಕ್ ಅಮಾನ್ಯಗೊಂಡ ನಂತರ, ನೆಗೋಷಿಯೇಬಲ್ ಇನ್ಸುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಯಿತು. ಆದರೆ, ಪ್ರಕರಣದ ವಿಚಾರಣೆಯಲ್ಲಿ ದೂರುದಾರರು ತಮ್ಮ ಪರವಾದ ನಗದು ವಹಿವಾಟು ಮತ್ತು ಚೆಕ್ ನೀಡಿಕೆಯನ್ನು ಅನುಮಾನ ಮೀರಿ ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂಬ ವಿಚಾರಣಾ ನ್ಯಾಯಾಲಯದ ತೀರ್ಮಾನದಲ್ಲಿ ಯಾವುದೇ ದೋಷವಿಲ್ಲ ಎಂದು ನ್ಯಾಯಾಲಯವು ಕಂಡುಕೊಂಡಿತು. ನಂತರ ಮೇಲ್ಮನವಿಯನ್ನು ವಜಾಗೊಳಿಸಿ ಆರೋಪಿಯ ಖುಲಾಸೆ ಎತ್ತಿ ಹಿಡಿಯಿತು.

NI ಕಾಯ್ದೆಯ ಊಹೆಗಳನ್ನು ಪಡೆಯುವ ಮೊದಲು ದೂರುದಾರರು ವಹಿವಾಟಿನ ನೇರ ಜ್ಞಾನ ಹೊಂದಿರುವ ವ್ಯಕ್ತಿಯ ಮೂಲಕ ಚೆಕ್ ಕಾರ್ಯಗತಗೊಳಿಸುವಿಕೆಯನ್ನು ಸಾಬೀತುಪಡಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ದೂರುದಾರರಿಗೆ ವಹಿವಾಟಿನ ಬಗ್ಗೆ ವೈಯಕ್ತಿಕ ಜ್ಞಾನವಿಲ್ಲದಿದ್ದಾಗ ಮತ್ತು ಹಣವನ್ನು ಮುಂಗಡವಾಗಿ ನೀಡಿದ ವ್ಯಕ್ತಿಯನ್ನು ಪರೀಕ್ಷಿಸದಿದ್ದರೆ, ಶಾಸನಬದ್ಧ ಊಹೆಗಳನ್ನು ಅನ್ವಯಿಸಲಾಗುವುದಿಲ್ಲ. ದೂರುದಾರರು ಮೊದಲು ವಹಿವಾಟಿನ ನೇರ ಜ್ಞಾನ ಹೊಂದಿರುವ ಸಾಕ್ಷಿಯ ಮೂಲಕ ಚೆಕ್ ವಹಿವಾಟು ಮತ್ತು ಕಾರ್ಯಗತಗೊಳಿಸುವಿಕೆಯನ್ನು ಸಾಬೀತುಪಡಿಸಬೇಕು. ಅದರ ನಂತರ ಕಾಯಿದೆಯ ಸೆಕ್ಷನ್ 118 ಮತ್ತು 139 ರ ಅಡಿಯಲ್ಲಿ ಶಾಸನ ಬದ್ಧ ಪೂರ್ವಭಾವನೆಯ ಪ್ರಯೋಜನ ಪಡೆಯಬೇಕು ಎಂದು ನ್ಯಾಯಪೀಠ ತಿಳಿಸಿತು.

ದೂರುದಾರರಿಗೆ ಸ್ವತಃ ವಹಿವಾಟು, ಹಣದ ವರ್ಗಾವಣೆ ಮತ್ತು ಕಾರ್ಯಗತಗೊಳಿಸುವಿಕೆಯ ಬಗ್ಗೆ ತಿಳಿದಿಲ್ಲದಿದ್ದರೆ, ಅಂತಹ ಸಾಕ್ಷಿಯ ಸಾಕ್ಷ್ಯವು ಊಹೆಗಳನ್ನು ಅನ್ವಯಿಸಲು ಅಗತ್ಯವಾದ ಮೂಲಭೂತ ಸಂಗತಿಗಳನ್ನು ಸ್ಥಾಪಿಸಲು ಸಾಕಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿ ಅರ್ಜಿ ವಜಾಗೊಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.