ನಿವೃತ್ತಿಗೆ ಒಂದೆಡು ದಿನ ಮುನ್ನ ಅಕ್ರಮ: ಪಿಂಚಣಿ ಕಡಿತ ಅಸಮಂಜಸ- ಹೈಕೋರ್ಟ್
ತಿರುವನಂತಪುರಂ: ನಿವೃತ್ತಿಗೆ ಕೆಲವೇ ದಿನಗಳ ಮೊದಲು ನಡೆದಿದೆ ಎಂದು ಆರೋಪಿಸಲಾದ ಘಟನೆಗೆ ಸಂಬಂಧಿಸಿದಂತೆ ಪಿಂಚಣಿಯಲ್ಲಿ ಕಡಿತ ವಿಧಿಸುವುದು ಅಸಮಂಜಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್., ನಿವೃತ್ತ ಅಂಚೆ ಮಾಸ್ತರ್ ಗೆ ಪರಿಹಾರಕ್ಕೆ ಆದೇಶಿಸಿದೆ.
ತನ್ನ ವಿರುದ್ಧ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೂಲ ಅರ್ಜಿಯನ್ನು ತಿರಸ್ಕರಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT), ಎರ್ನಾಕುಳಂ ಪೀಠದ ಆದೇಶವನ್ನು ಪ್ರಶ್ನಿಸಿ ನಿವೃತ್ತ ಅಂಚೆ ಮಾಸ್ತರ್ ರೊಬ್ಬರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಬಸಂತ್ ಬಾಲಾಜಿ ಅವರ ವಿಭಾಗೀಯ ಪೀಠವು, ಅರ್ಜಿದಾರರ ಮೇಲೆ ವಿಧಿಸಲಾದ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ ಸೇವೆಯಿಂದ ನಿವೃತ್ತಿಯಾದ ನೌಕರನ ವಿರುದ್ಧ ನಿವೃತ್ತಿಗೆ ಕೇವಲ ಒಂದು ಅಥವಾ ಎರಡು ದಿನಗಳ ಮೊದಲು ನಡೆದಿತ್ತೆಂದು ಆರೋಪಿಸಲಾದ ಘಟನೆಯ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಪಿಂಚಣಿಯ 15% ಕಡಿತ ವಿಧಿಸುವುದು ಅವರಿಗೆ ಗಂಭೀರ ಆರ್ಥಿಕ ಸಂಕಷ್ಟ ಮತ್ತು ನಷ್ಟವನ್ನು ಉಂಟುಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿತು.
ತನ್ನ ಮೇಲಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ಮನವಿಗಳಲ್ಲಿ ಅಸಭ್ಯ ಹಾಗೂ ಅಸಂಯಮಿತ ಭಾಷೆಯನ್ನು ಬಳಸಿದ್ಧಾರೆ ಎಂಬುದು ಅರ್ಜಿದಾರರ ವಿರುದ್ಧದ ಆರೋಪ. “ನೌಕರರು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ. ನಿವೃತ್ತಿಗೆ ಒಂದು ಅಥವಾ ಎರಡು ದಿನಗಳ ಮೊದಲು ನಡೆದಿತ್ತೆಂದು ಹೇಳಲಾದ ಘಟನೆಯ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅವನ ಪಿಂಚಣಿಯಲ್ಲಿ 15% ಕಡಿತ ವಿಧಿಸುವುದು ಖಂಡಿತವಾಗಿಯೂ ಅವರಿಗೆ ಗಮನಾರ್ಹ ಆರ್ಥಿಕ ತೊಂದರೆ ಮತ್ತು ನಷ್ಟವನ್ನುಂಟುಮಾಡುತ್ತದೆ. ಇದರಿಂದ, ಸಾಬೀತಾದ ಆರೋಪಗಳು ಗಂಭೀರವಾಗಿದ್ದರೆ, ವಿಶೇಷವಾಗಿ CCS (Pension) Rules ನ ನಿಯಮ 9 ರ ವ್ಯಾಪ್ತಿಯಲ್ಲಿ ಇಂತಹ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ ಎಂದು ಅರ್ಥೈಸಬಾರದು ಎಂದು ನ್ಯಾಯಪೀಠ ತಿಳಿಸಿತು.
ಇದಕ್ಕೂ ಮೊದಲು ಕೂಡ ಅರ್ಜಿದಾರರ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗಿದ್ದು, ಅವರು ತಪ್ಪಿತಸ್ಥನೆಂದು ಕಂಡುಬಂದ ಪರಿಣಾಮವಾಗಿ ಖಂಡನೆ (censure) ಅಥವಾ ಎಚ್ಚರಿಕೆ (warning) ಶಿಕ್ಷೆ ವಿಧಿಸಲಾಗಿತ್ತು. ಈ ಬೆಳವಣಿಗೆಯಿಂದ ಅವರಲ್ಲಿ ಅಸಮಾಧಾನ ಮತ್ತು ನಿರಾಶೆಯ ಭಾವನೆ ಉಂಟಾಗಿದ್ದು, ಅದರ ಪರಿಣಾಮವಾಗಿಯೇ ಅವರು ತನ್ನ ಮನವಿಗಳಲ್ಲಿ ಆಕ್ಷೇಪಾರ್ಹ ಪದಗಳು ಮತ್ತು ವಾಕ್ಯಗಳನ್ನು ಬಳಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸಾಬೀತಾದ ಆರೋಪಗಳಿಗೆ ಹೋಲಿಸಿದರೆ ವಿಧಿಸಲಾದ ಶಿಕ್ಷೆ ಸ್ವಲ್ಪಮಟ್ಟಿಗೆ ಅತಿಯಾದ ಮತ್ತು ಅಸಮಂಜಸವಾಗಿದೆ. ಆದ್ದರಿಂದ, ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸಿ ಸೂಕ್ತವಾದ ಹೊಸ ಆದೇಶ ಹೊರಡಿಸಲು ಸಮರ್ಥ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವುದು ನ್ಯಾಯೋಚಿತ ಎಂದು ನ್ಯಾಯಾಲಯ ತಿಳಿಸಿದ್ದು, ಮೂಲ ಅರ್ಜಿಯನ್ನು ನ್ಯಾಯಪೀಠ ಅಂಗೀಕರಿಸಿ, ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದ ಮಟ್ಟಿಗೆ ಮಾತ್ರ ನ್ಯಾಯಮಂಡಳಿಯ ತೀರ್ಪನ್ನು ರದ್ದುಪಡಿಸಿತು. ಅಲ್ಲದೆ, ಅರ್ಜಿದಾರನ ವಿರುದ್ಧ ವಿಧಿಸಲಾದ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸಿ ಹೊಸ ಆದೇಶ ಹೊರಡಿಸುವಂತೆ ಭಾರತ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
