19/06/2026

Law Guide Kannada

Online Guide

ಕೊಲೀಜಿಯಂನಿಂದ ನ್ಯಾಯಾಧೀಶರ ಶಿಫಾರಸು: ಸುಪ್ರೀಂ ಮೆಟ್ಟಿಲೇರಿದ ಜಡ್ಜ್

ನವದೆಹಲಿ: ಮೂವರು ನ್ಯಾಯಾಧೀಶರನ್ನು ಹೈಕೋರ್ಟ್ ಗೆ ಬಡ್ತಿ ನೀಡುವ ಕೊಲಿಜಿಯಂ ಶಿಫಾರಸುಗಳ ವಿರುದ್ಧ ಹಿಮಾಚಲ ಪ್ರದೇಶದ ನ್ಯಾಯಾಂಗ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಧರ್ಮಶಾಲಾದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಅರವಿಂದ್ ಮಲ್ಲೊತ್ರಾ ಅವರು ಕೊಲಿಜಿಯಂ ವಿರುದ್ದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಹಿಮಾಚಲ ಪ್ರದೇಶ ಹೈಕೋರ್ಟ್ಗೆ ಮೂವರು ನ್ಯಾಯಾಧೀಶರನ್ನು ಬಡ್ತಿ ನೀಡುವ ಕೊಲಿಜಿಯಂನ ಇತ್ತೀಚಿನ ಶಿಫಾರಸನ್ನು ಪ್ರಶ್ನಿಸಿದ್ದಾರೆ. ತಮಗಿಂತ ಕಿರಿಯ ಅಧಿಕಾರಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ ಜೂನ್ 3 ರಂದು ಹಿಮಾಚಲ ಪ್ರದೇಶ ಹೈಕೋರ್ಟ್ಗೆ ಬಡ್ತಿ ನೀಡಲು ನ್ಯಾಯಾಂಗ ಅಧಿಕಾರಿಗಳಾದ ಚಿರಾಗ್ ಭಾನು ಸಿಂಗ್, ಭೂಪೇಶ್ ಶರ್ಮಾ ಮತ್ತು ಯೋಗೇಶ್ ಜಸ್ಟಾಲ್ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ಪ್ರಧಾನ ನ್ಯಾಯಾಧೀಶ ಅರವಿಂದ್ ಮಲ್ಲೊತ್ರಾ ತಕರಾರು ಎತ್ತಿದ್ದಾರೆ.

ಈ ವಿಚಾರದ ಬಗ್ಗೆ ತುರ್ತು ವಿಚಾರಣೆಗಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರ ಮುಂದೆ ಪ್ರಸ್ತಾಪಿಸಿದಾಗ, ಅರ್ಜಿದಾರರ ಪರಿಗಣನಾ ಹಕ್ಕನ್ನು ಉಲ್ಲಂಘಿಸಲಾಗಿದೆ ಏಕೆಂದರೆ ಕೊಲಿಜಿಯಂ ಬಡ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಕಿರಿಯ ಅಧಿಕಾರಿಗಳ ಹೆಸರುಗಳನ್ನು ಕಳುಹಿಸಿದೆ ಎಂದು ವಕೀಲರು ವಾದಿಸಿದರು.
ಸಿಜೆಐ ಸೂರ್ಯಕಾಂತ್ ಈ ವಿಷಯವನ್ನು ವಿಚಾರಣೆಗೆ ಒಳಪಡಿಸಲು ಒಪ್ಪಿಕೊಂಡರು. ಇಂತಹ ಸವಾಲು ಇದೇ ಮೊದಲಲ್ಲ. 2024 ರಲ್ಲಿ, ಹಿಮಾಚಲ ಪ್ರದೇಶದಲ್ಲಿ ನಿಯೋಜಿತರಾದ ಇಬ್ಬರು ಜಿಲ್ಲಾ ನ್ಯಾಯಾಧೀಶರು ಇದೇ ರೀತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.