19/06/2026

Law Guide Kannada

Online Guide

PTCL Act: ಅಸಾಂವಿಧಾನಿಕ, ಅಸಂಬದ್ಧ ತೀರ್ಪುಗಳನ್ನ ನೀಡಿದ್ರೆ ಜನ ಸಹಿಸಲ್ಲ, ತೀರ್ಪೂ ಉಳಿಯಲ್ಲ: ಗೋಪಾಲ ಗೌಡ

ಬೆಂಗಳೂರು: ಪಿಟಿಸಿಎಲ್ ಕಾಯ್ದೆಯಡಿ ವಿಳಂಬವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನ್ಯಾಯಮೂರ್ತಿಗಳು ಅಸಾಂವಿಧಾನಿಕ, ಅಸಂಬದ್ಧ ತೀರ್ಪುಗಳನ್ನ ನೀಡಿದರೇ ಜನ ಸಹಿಸುವುದಿಲ್ಲ ತೀರ್ಪುಗಳೂ ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಆಕ್ಷೇಪಿಸಿದರು.

ಅಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (ಎಐಎಲ್ಎಜೆ), ಮಂಥನ್ ಲಾ, ಆಲ್ಬರ್ನೇಟಿವ್ ಲಾ ಫೋರಮ್ (ಎಎಲ್ಎಫ್), ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಮತ್ತು ಸ್ವತಂತ್ರ ಪ್ರಗತಿಪರ ಸಂಶೋಧಕರು ಶನಿವಾರ ಹಮ್ಮಿಕೊಂಡಿದ್ದ `ಪಿಟಿಸಿಎಲ್ ಕಾಯ್ದೆ-1978ರ ಅನುಷ್ಠಾನದಲ್ಲಿನ ಸಮಸ್ಯೆಗಳು’ ಕುರಿತ ರಾಜ್ಯ ಮಟ್ಟದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿವೃತ್ತ ನ್ಯಾ. ವಿ.ಗೋಪಾಲ ಗೌಡ ಅವರು, ‘ಅಸಾಂವಿಧಾನಿಕ, ಅಸಂಬದ್ಧ ತೀರ್ಪುಗಳನ್ನು ನ್ಯಾಯಮೂರ್ತಿಗಳು ನೀಡಿದರೆ ಜನರು ಸಹಿಸುವುದಿಲ್ಲ. ಪ್ರಶ್ನೆ ಮಾಡಲಿದ್ದಾರೆ. ಜನ ಪ್ರವಾಹದಂತೆ ಹರಿದು ಬರಲಿದ್ದಾರೆ. ಆಗ ಇಂಥ ತೀರ್ಪುಗಳು ಉಳಿಯುವುದಿಲ್ಲ ಪಿಟಿಸಿಎಲ್ ಕಾಯ್ದೆಯಡಿ ವಿಳಂಬವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಕಾಲಮಿತಿಯನ್ನು ಯಾವ ಆಧಾರದಲ್ಲಿ ವಿಧಿಸಿದ್ದೀರಿ? ಕಾಯ್ದೆಯ ಸೆಕ್ಷನ್ 5ಕ್ಕೆ ಕಾಲಮಿತಿ ಹೇಗೆ ಸೇರಿಸಿದ್ದೀರಿ? ಕಾನೂನಿನಲ್ಲಿ ಇಲ್ಲದೇ ಇರುವುದನ್ನು ಸೇರಿಸುವ ಅಧಿಕಾರವನ್ನು ನಿಮಗೆ ಕೊಟ್ಟವರು ಯಾರು? ಸಂವಿಧಾನದ ಆಶಯಕ್ಕೆ, ರಾಜ್ಯ ನೀತಿಯ ನಿರ್ದೇಶನ ತತ್ವಗಳಿಗೆ ವಿರುದ್ಧವಾಗಿ ತೀರ್ಪು ನೀಡುವವರು ನ್ಯಾಯಾಧೀಶರು ಹೇಗಾಗುತ್ತಾರೆ’ ಎಂದು ಪ್ರಶ್ನಿಸಿದರು.

ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಬಡವರ ಬಗ್ಗೆ, ಎಸ್ಸಿ, ಎಸ್ಟಿ, ಹಿಂದುಳಿದವರು, ಮಹಿಳೆಯರು, ರೈತರ ಸಮಸ್ಯೆ ಬಗ್ಗೆ ಕಾಳಜಿ ಇರುವವರು ಇಲ್ಲದೇ ಇರುವುದರಿಂದಲೇ ಪಿಟಿಸಿಎಲ್ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

‘ಕಾಲಮಿತಿಯ ಕಾರಣ ನೀಡಿ ಅರ್ಜಿ ತಿರಸ್ಕರಿಸುವ ಮೂಲಕ ಮಂಚೇಗೌಡ ಮತ್ತು ಇತರರು ಹಾಗೂ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿದ ತೀರ್ಪಿನ ಉಲ್ಲಂಘನೆ ಮಾಡಲಾಗಿದೆ. ಕಾನೂನು ತಿಳಿದುಕೊಳ್ಳಬೇಕು. ಇಲ್ಲದೇ ಇದ್ದರೆ ನಾವೇ ಕಾನೂನು ತಿಳಿಸುವ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಪಿಟಿಸಿಎಲ್ ಕಾಯ್ದೆಯು ಸಾಮಾಜಿಕ ಅನ್ಯಾಯಕ್ಕೆ ಹಿಡಿದ ಕನ್ನಡಿ…
ಬಳಿಕ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ ಮಾತನಾಡಿ ‘ಪಿಟಿಸಿಎಲ್ ಕಾಯ್ದೆಯು ಸಾಮಾಜಿಕ ಅನ್ಯಾಯಕ್ಕೆ ಹಿಡಿದ ಕನ್ನಡಿ. ಸಾವಿರಾರು ವರ್ಷಗಳಿಂದ ಸಾಮಾಜಿಕ ಅನ್ಯಾಯ ಮಾಡುತ್ತಾ ಬರಲಾಗಿದ್ದು, ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ವೈದಿಕಶಾಹಿ ಮನಸ್ಥಿತಿಗಳೇ ಅಧಿಕಾರ ಸ್ಥಾನದಲ್ಲಿ ಇರುವುದರಿಂದ ಅವರ ಮನಸ್ಸನ್ನು ಬದಲಾಯಿಸಲು ಆಗುತ್ತಿಲ್ಲ. ಈ ಅನ್ಯಾಯದ ವಿರುದ್ಧ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಚಳವಳಿ ಕಟ್ಟಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಟಿಸಿಎಲ್ ಕಾಯ್ದೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಮತ್ತು ಅನುಷ್ಠಾನದಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಿಸಲು ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಾಗುವುದು. ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ತಿಳಿಸಲಾಗುವುದು ಎಂದು ತೀರ್ಪುಗಾರರ ಮಂಡಳಿ ಸದಸ್ಯರು ತಿಳಿಸಿದರು. ಹಾಗೆಯೇ ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮತ್ತು ದಾವಣಗೆರೆ ಜಿಲ್ಲೆಗಳಿಂದ ಬಂದ ಸಂತ್ರಸ್ತರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಡಿ. ತಂಗರಾಜ್, ಭೂಶಕ್ತಿ ಕೇಂದ್ರ ಅಧ್ಯಕ್ಷೆ ಜ್ಯೋತಿ ರಾಜ್, ಪಿಟಿಸಿಎಲ್ ಕಾನೂನು ತಜ್ಞ ಎಚ್.ಎಲ್. ವೆಂಕಟೇಶ್, ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.