ಗಂಭೀರ ಪ್ರಕರಣದಲ್ಲಿ ಮಾತ್ರ ನೌಕರನನ್ನು ಸೇವೆಯಿಂದ ವಜಾ ಕಠಿಣ ಶಿಕ್ಷೆಗೆ ಅವಕಾಶ- ಸುಪ್ರೀಂಕೋರ್ಟ್
ಮೈಸೂರು,ಜೂನ್ 19 2026 (www.justkannada.in): ಒಬ್ಬ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸುವುದು ಅತ್ಯಂತ ಕಠಿಣ ಮತ್ತು ತೀವ್ರ ಸ್ವರೂಪದ ಶಿಕ್ಷೆಯಾಗಿದ್ದು, ಗಂಭೀರ ಪ್ರಕರಣದಲ್ಲಿ ಮಾತ್ರ ಈ ಶಿಕ್ಷೆಯನ್ನ ವಿಧಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ನೌಕರನು ಗಂಭೀರ ಸ್ವರೂಪದ ದುರ್ವರ್ತನೆ ಅಥವಾ ಶಿಸ್ತುಭಂಗದ ತೋರಿದ ಪ್ರಕರಣಗಳಲ್ಲಿ ಮಾತ್ರ ಈ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದೆ ಎಂದು ನ್ಯಾಯಪೀಠ ಹೇಳಿದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ತನ್ನ ಉದ್ಯೋಗಿಯನ್ನು ವಜಾಗೊಳಿಸಿತ್ತು. 2017ರ ಜುಲೈ 12ರಂದು ಮಾಡಲಾದ ಆದೇಶವನ್ನು ಕಾರ್ಮಿಕ ನ್ಯಾಯಾಲಯ ಮತ್ತು ಕೈಗಾರಿಕಾ ಟ್ರಿಬ್ಯೂನಲ್ ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಾಧಿತ ನೌಕರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಸದರಿ ಆದೇಶವನ್ನು ರದ್ದುಗೊಳಿಸಿದೆ.
ನೌಕರನ ವಜಾ ಎಂಬ ಶಿಕ್ಷೆಯು ಕೇವಲ ನೌಕರಿನಿಗೆ ಮಾತ್ರವಲ್ಲ, ಅದು ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಈ ಶಿಕ್ಷೆಯನ್ನು ಪ್ರಯೋಗಿಸುವ ಮುನ್ನ, ಉದ್ಯೋಗದಾತರು ಗರಿಷ್ಟ ಎಚ್ಚರಿಕೆಯನ್ನು ವಹಿಸಬೇಕು ಮತ್ತು ಅಪರಾಧದ ತೀವ್ರತೆ ಮತ್ತು ಸ್ವರೂಪವನ್ನು ಶಿಸ್ತು ಸಮಿತಿ ಪರಿಪೂರ್ಣವಾಗಿ ಅರ್ಥೈಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಭ್ರಷ್ಟಾಚಾರ, ಲಂಚ ಸ್ವೀಕಾರ, ವೃತ್ತಿ ದೋಷ, ಅನೀತಿಯುತ ಚಟುವಟಿಕೆ, ಉದ್ಯೋಗದಾತರಿಗೆ ಗಣನೀಯ ನಷ್ಟವನ್ನುಂಟುಮಾಡುವ ಕೃತ್ಯಗಳು ಅಥವಾ ನಿರಂತರ ಸೇವೆಗೆ ಸಂಪೂರ್ಣ ಅನರ್ಹತೆಯನ್ನು ತೋರಿಸುವ ನಡವಳಿಕೆಯನ್ನು ಒಳಗೊಂಡ ಪ್ರಕರಣಗಳಲ್ಲಿ ಮಾತ್ರ ಇಂತಹ ಕಠಿಣ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅದೇ ರೀತಿ, ಶಿಕ್ಷೆಯನ್ನು ವಿಧಿಸುವ ಮುನ್ನ ಆ ನೌಕರನ ಹಿಂದಿನ ದಾಖಲೆಗಳು, ಸೇವಾವಧಿ, ಕರ್ತವ್ಯ ಲೋಪದ ಸ್ವರೂಪ, ನೌಕರನ ವಯಸ್ಸನ್ನು ವಿಷದವಾದ ಪರಿಶೀಲನೆ ಮಾಡಬೇಕು. ನೌಕರನು ಮಾಡಿದ್ದಾನೆ ಎಂದು ಆರೋಪಿಸಲಾದ ದುಷ್ಕೃತ್ಯವು ತುಂಬಾ ಗಂಭೀರವಾಗಿದ್ದರೆ, ನೌಕರನ ಮುಂದುವರಿಕೆಯು ಶಿಸ್ತು, ನಂಬಿಕೆ ಅಥವಾ ಸಾಂಸ್ಥಿಕ ಕಾರ್ಯಚಟುವಟಿಕೆಗೆ ಸಂಪೂರ್ಣವಾಗಿ ಹೊಂದಿಕೆಯಾಗದಿದ್ದರೆ ವಜಾಗೊಳಿಸುವಿಕೆಯನ್ನು ಸಾಮಾನ್ಯವಾಗಿ ಸಮರ್ಥಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
