23/06/2026

Law Guide Kannada

Online Guide

ಅಕ್ರಮ ಸಂಬಂಧದಿಂದ ಜನಿಸಿದ ಮಗು ಕಾನೂನು ಬದ್ದ ಎಂದು ಪರಿಗಣಿಸಿ, ತಂದೆ ಆಸ್ತಿಯಲ್ಲಿ ಪಾಲು ನೀಡಿ – ಹೈಕೋರ್ಟ್

ಬೆಂಗಳೂರು: ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (1) ಪ್ರಕಾರ, ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ದವೆಂದು ಪರಿಗಣಿಸಬೇಕು. ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಈ ತೀರ್ಪು ನೀಡಿದ್ದು, ಅಕ್ರಮ ಸಂಬಂಧದಿಂದ ಜನಿಸಿದ 10 ವರ್ಷದ ಬಾಲಕನಿಗೆ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಸಂದಾಯವಾಗಬೇಕಾದ ಒಟ್ಟು 13.28 ಲಕ್ಷ ರೂಪಾಯಿಗಳ ಪರಿಹಾರದಲ್ಲಿ ಶೇಕಡಾ 40 ಪಾಲನ್ನು ನೀಡಬೇಕೆಂದು ಆದೇಶಿಸಿದರು.

ಬಾಲಕನಿಗೆ ಸಂದಾಯವಾಗಬೇಕಾದ ಹಣವನ್ನು ಸ್ಥಿರ ಠೇವಣಿಯಲ್ಲಿ ಇಡಬೇಕು. ಹುಡುಗನ ಶೈಕ್ಷಣಿಕ ಮತ್ತು ಇತರ ವೆಚ್ಚಗಳನ್ನು ಪೂರೈಸಲು ತಾಯಿಗೆ ತ್ರೈಮಾಸಿಕವಾಗಿ ಬಡ್ಡಿಮೊತ್ತವನ್ನು ನೀಡಬೇಕು, ಬಾಲಕನಿಗೆ 18 ವರ್ಷ ತುಂಬಿದ ಮೇಲೆ ಹಣ ಸಂದಾಯ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ಬಾಲಕನ ತಾಯಿಗೆ ಪರಿಹಾರ ಕೊಡುವ ಆದೇಶವನ್ನು ನೀಡಲು ನ್ಯಾಯಪೀಠ ನಿರಾಕರಿಸಿತು. ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸುತ್ತಿರುವಾಗ ಮತ್ತೊಬ್ಬರ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದರೆ ಆ ಸಂಬಂಧವನ್ನು ಪರಿಗಣಿಸಲಾಗುವುದಿಲ್ಲ. ಹುಡುಗನ ತಂದೆ ಇನ್ನೊಬ್ಬ ಮಹಿಳೆಯೊಂದಿಗೆ ‘ಅಕ್ರಮ ಸಂಬಂಧ’ ಹೊಂದಿದ್ದಾಗ ಆ ಮದುವೆಯು ಸಹ ಅಸ್ತಿತ್ವದಲ್ಲಿರುತ್ತದೆ ಇದರ ಪರಿಣಾಮವಾಗಿ ಅವರಿಗೆ ಮಗು ಜನಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಇನ್ನು ಬಾಲಕನ ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ಪರಿಹಾರಕ್ಕಾಗಿ ಬಾಲಕನ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.