ಹೈಮೆನ್ ಕಾರಣ ನೀಡಿ ಅತ್ಯಾಚಾರ ಆರೋಪಿಗೆ ವಿನಾಯಿತಿ ಸಾಧ್ಯವಿಲ್ಲ: 44 ವರ್ಷಗಳ ಹಳೇ ಕೇಸ್ ನಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
ಉತ್ತರ ಪ್ರದೇಶ: ಸಂತ್ರಸ್ತೆಯ ಹೇಳಿಕೆ ಸಂಪೂರ್ಣ ನಂಬಲರ್ಹವಾಗಿರುವಾಗ, ಕೇವಲ ಹೈಮೆನ್ (ಕನ್ಯಾಚರ್ಮ) ಹಳೆಯದಾಗಿದೆ ಎಂಬ ವೈದ್ಯರ ಅಭಿಪ್ರಾಯದ ಮೇಲೆ ಆರೋಪಿ ಅತ್ಯಾಚಾರ ಎಸಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ್ ರೈ ಅವರ ಏಕಸದಸ್ಯ ಪೀಠವು, ಸಂತ್ರಸ್ತೆಯ ಹೇಳಿಕೆಯು ನಂಬಲರ್ಹವಾಗಿದ್ದಲ್ಲಿ, ಕೇವಲ ವೈದ್ಯಕೀಯ ವರದಿಯಲ್ಲಿ ಆಕೆಯ ಹೈಮೆನ್ (ಕನ್ಯಾಚರ್ಮ) ಹಳೆಯದಾಗಿದೆ ಅಥವಾ ಹರಿದುಹೋಗಿದೆ ಎಂಬ ತಾಂತ್ರಿಕ ಕಾರಣವನ್ನು ಮುನ್ನೆಲೆಗೆ ತಂದು ಆರೋಪಿಗೆ ಯಾವುದೇ ರೀತಿಯ ಲಾಭ ನೀಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ‘ಅತ್ಯಾಚಾರ’ ಎಂಬುದು ಒಂದು ಕಾನೂನಾತ್ಮಕ ಪದವೇ ಹೊರತು ವೈದ್ಯಕೀಯ ಪದವಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಮೂಲಕ 1982 ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರಲ್ಲಿ ಅಪರಾಧಿಗೆ 1983 ರಲ್ಲಿ ಕೆಳ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣೆ ವೇಳೆ ನ್ಯಾಯಪೀಠವು, ಈ ಕುರಿತು ವಿಸ್ತಾರವಾಗಿ ಮಾತನಾಡಿದೆ. ಮಹಿಳೆಯ ದೇಹದಲ್ಲಿ ಹೈಮೆನ್ ಹರಿಯಲು ಕೇವಲ ಲೈಂಗಿಕ ಸಂಪರ್ಕ ಮಾತ್ರ ಕಾರಣವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದು, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಕುದುರೆ ಸವಾರಿ, ಕಠಿಣ ದೈಹಿಕ ಶ್ರಮ ಅಥವಾ ಆಕಸ್ಮಿಕ ಅಪಘಾತಗಳಿಂದಲೂ ಅದು ಹರಿದುಹೋಗುವ ಸಾಧ್ಯತೆ ಇರುತ್ತದೆ. ಕೆಲವು ಮಹಿಳೆಯರು ಹುಟ್ಟಿನಿಂದಲೇ ಹೈಮೆನ್ ಹೊಂದಿಲ್ಲದಿರಬಹುದು ಅಥವಾ ಕೆಲವರಲ್ಲಿ ಅದು ಅತ್ಯಂತ ಸ್ಥಿತಿಸ್ಥಾಪಕತ್ವದಿಂದ ಕೂಡಿರಬಹುದು. ಹೀಗಾಗಿ ಇಂತಹ ವೈದ್ಯಕೀಯ ಅಂಶಗಳು ಸಂತ್ರಸ್ತೆಯ ನಂಬಲರ್ಹ ಮೌಖಿಕ ಸಾಕ್ಷ್ಯವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
44 ವರ್ಷಗಳ ಹಳೆಯ ಪ್ರಕರಣದ ವಿವರ ಹೀಗಿದೆ…
1982 ರಲ್ಲಿ ಒಂದು ದಿನ ಬೆಳಿಗ್ಗೆ 9:30 ರ ಸುಮಾರಿಗೆ15 ವರ್ಷದ ಬಾಲಕಿಯೊಬ್ಬಳು ತನ್ನ ಹಳ್ಳಿಯ ಕಾಲುವೆ ದಾಟಿ ಶೌಚಕ್ಕಾಗಿ ಹೋಗಿದ್ದಾಗ, ರಾಕೇಶ್ ಎಂಬಾತ ತನ್ನ ಮತ್ತೊಬ್ಬ ಸಹಚರನೊಂದಿಗೆ ಸೇರಿ ಆಕೆಯನ್ನು ತಡೆದು ಅತ್ಯಾಚಾರವೆಸಗಿದ್ದ. ಬಾಲಕಿ ಪ್ರತಿರೋಧ ಒಡ್ಡಿದಾಗ ಆಕೆಯ ಮೇಲೆ ಬಲವಾಗಿ ಹಲ್ಲೆ ನಡೆಸಲಾಗಿತ್ತು. ಅಂದು ಮೌಖಿಕ ಸಾಕ್ಷ್ಯ ಹಾಗೂ ದೇಹದ ಮೇಲಿದ್ದ ಆರು ಗಾಯಗಳ ವೈದ್ಯಕೀಯ ವರದಿಯನ್ನು ಆಧರಿಸಿ ಅಲಹಾಬಾದ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೇ 1983 ರಲ್ಲಿ ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಪರಾಧಿ ರಾಕೇಶ್ ಹೈಕೋರ್ಟ್ ಮೊರೆ ಹೋಗಿದ್ದ.
ಹೈಕೋರ್ಟ್ ವಿಚಾರಣೆ ವೇಳೆ ಅಪರಾಧಿಯ ಪರ ವಾದ ಮಂಡಿಸಿದ್ದ ವಕೀಲರು, “ವೈದ್ಯಕೀಯ ವರದಿಯಲ್ಲಿ ಸಂತ್ರಸ್ತೆಯ ಹೈಮೆನ್ ಹಳೆಯದಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಆಕೆ ಮೊದಲೇ ಬೇರೆಯವರೊಂದಿಗೆ ದೈಹಿಕ ಸಂಬಂಧ ಹೊಂದಿರುವ ಅಭ್ಯಾಸವಿತ್ತು” ಎಂದು ವಾದಿಸಿ, ಆಕೆಯ ಶೀಲದ ಮೇಲೆ ಅಪವಾದ ಹೊರಿಸುವ ಮೂಲಕ ಅತ್ಯಾಚಾರ ನಡೆದಿಲ್ಲ ಎಂದು ಬಿಂಬಿಸಲು ಮುಂದಾಗಿದ್ದರು.
ಆದರೆ ಈ ತಾಂತ್ರಿಕ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠವು, “ಸಂತ್ರಸ್ತೆಯ ಹೇಳಿಕೆ ಸಂಪೂರ್ಣ ನಂಬಲರ್ಹವಾಗಿರುವಾಗ, ಕೇವಲ ಹೈಮೆನ್ ಹಳೆಯದಾಗಿದೆ ಎಂಬ ವೈದ್ಯರ ಅಭಿಪ್ರಾಯದ ಮೇಲೆ ಆರೋಪಿ ಅತ್ಯಾಚಾರ ಎಸಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅತ್ಯಾಚಾರಗಳು ಸಾಮಾನ್ಯವಾಗಿ ರಹಸ್ಯ ವಾತಾವರಣದಲ್ಲಿ ನಡೆಯುವುದರಿಂದ ಅಲ್ಲಿ ಸ್ವತಂತ್ರ ಪ್ರತ್ಯಕ್ಷದರ್ಶಿಗಳು ಸಿಗುವ ಸಾಧ್ಯತೆ ಇರುವುದಿಲ್ಲ” ಎಂದು ಹೇಳಿ ಜೂನ್ 23 ರಂದು ನೀಡಿರುವ ಈ ತೀರ್ಪಿನಲ್ಲಿ ಹೈಕೋರ್ಟ್, ಜಾಮೀನಿನ ಮೇಲಿದ್ದ ಅಪರಾಧಿ ರಾಕೇಶ್ ನ ಜಾಮೀನು ಬಾಂಡ್ ಗಳನ್ನು ತಕ್ಷಣವೇ ರದ್ದುಗೊಳಿಸಿತು. ಹಾಗೆಯೇ ಬಾಕಿ ಉಳಿದಿರುವ ಶಿಕ್ಷೆಯನ್ನು ಅನುಭವಿಸಲು ಮುಂದಿನ 10 ದಿನಗಳ ಒಳಗಾಗಿ ಕೆಳ ನ್ಯಾಯಾಲಯಕ್ಕೆ ಶರಣಾಗುವಂತೆ ಖಡಕ್ ಆದೇಶ ಹೊರಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
