ಕಾನೂನು ವೃತ್ತಿ ವ್ಯಾಪಾರವಲ್ಲ: ಜಾಹೀರಾತಿಗೆ ನಿಷಿದ್ಧ: ಮಾರ್ಗಸೂಚಿ ಹೊರಡಿಸಲು ಬಿಸಿಐಗೆ ಹೈಕೋರ್ಟ್ ನಿರ್ದೇಶನ
ಚೆನ್ನೈ: ಕಾನೂನು ವೃತ್ತಿ ವ್ಯಾಪಾರವಲ್ಲ. ಅದೊಂದು ಅಮೂಲ್ಯ ಸೇವೆ. ಇತ್ತೀಚೆಗೆ ಕಾನೂನು ವೃತ್ತಿಪರರು ವ್ಯಾಪಾರಿ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ಹೊರಹಾಕಿರುವ ಮದ್ರಾಸ್ ಹೈಕೋರ್ಟ್, ಜಾಹೀರಾತು ತೆಗೆದು ಹಾಕಲು ವಕೀಲರಿಗೆ ಸೂಚನೆ ನೀಡಿದೆ.
ಮದ್ರಾಸ್ ಹೈಕೋರ್ಟ್ನ ನ್ಯಾ. ಎಸ್.ಎಂ. ಸುಬ್ರಹ್ಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಕೆಲವು ಕಾನೂನು ವೃತ್ತಿಪರರು ವ್ಯಾಪಾರಿ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿ. ಕಾನೂನು ಸೇವೆ ಯಾವುದೇ ‘ಉದ್ಯೋಗ’ ಅಥವಾ ‘ವ್ಯಾಪಾರ’ವಲ್ಲ. ಅದೊಂದು ಅಮೂಲ್ಯ ಸೇವೆ. ಹೀಗಾಗಿ ವಕೀಲರು ಜಾಹೀರಾತು ನೀಡುವುದು ನಿಷಿದ್ಧ ಎ೦ದು ನ್ಯಾಯಪೀಠ ಪ್ರತಿಪಾದಿಸಿದೆ.
ಹಾಗೆಯೇ ವ್ಯಾಪಾರದ ಉದ್ದೇಶ ಮುಖ್ಯವಾಗಿ ಕೇವಲ ಲಾಭ ಗಳಿಸುವುದಾಗಿದೆ. ಆದರೆ ಕಾನೂನು ಸೇವೆ ಉನ್ನತ ಮೌಲ್ಯದಿ೦ದ ಕೂಡಿದ್ದು, ಇದರ ಹೆಚ್ಚಿನ ಭಾಗ ಸಮಾಜಕ್ಕೆ ಸೇವೆ ಒದಗಿಸುವುದಾಗಿದೆ. ವಕೀಲರು ಸೇವಾ ಶುಲ್ಕ ಪಡೆಯಬಹುದು. ಅದು ವಕೀಲರ ಸಮಯ ಮತ್ತು ಜ್ಞಾನವನ್ನು ಗೌರವಿಸಿ ಪಾವತಿಸಲಾಗುತ್ತದೆ ಎ೦ದು ನ್ಯಾಯಪೀಠ ಹೇಳಿದೆ.
ಈ ಮಧ್ಯೆ ಜಾಹೀರಾತುಗಳು, ಸಂದೇಶಗಳು ಮತ್ತು ಕಟೌಟ್ ಗಳ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಜಾಹೀರಾತು ನೀಡುವ ವಕೀಲರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ನಡೆಸಲು ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ದೇಶನ ನೀಡಲು ಮತ್ತು ಆ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಬಾರ್ ಕೌನ್ಸಿಲ್ ಆಫ್ ಇ೦ಡಿಯಾ(ಬಿಸಿಐ)ಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ವಕೀಲರು ಆನ್ಲೈನ್ ಸೇವಾ ಪೂರೈಕೆದಾರರ ಮೂಲಕ ಈಗಾಗಲೇ ಪ್ರಕಟಿಸಿರುವ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮತ್ತು ಭವಿಷ್ಯದಲ್ಲಿ ಅಂತಹ ಜಾಹೀರಾತುಗಳನ್ನು ಪ್ರಕಟಿಸದ೦ತೆ ಮಧ್ಯವರ್ತಿಗಳಿಗೆ ಸಲಹೆ ನೀಡುವಂತೆ ಬಾರ್ ಕೌನ್ಸಿಲ್ಗೆ ಸೂಚಿಸಿದೆ.
ಜೊತೆಗೆ “ಬಾರ್ ಕೌನ್ಸಿಲ್ ಆಫ್ ಇ೦ಡಿಯಾ ನಿಯಮ” ನಿಯಮ 36ನ್ನು ಉಲ್ಲಂಘಿಸಿದ ಆನ್ಲೈನ್ ಸೇವಾ “ಒದಗಿಸುವವರು / ಮಧ್ಯವರ್ತಿಗಳ ವಿರುದ್ಧ ದೂರುಗಳನ್ನು ದಾಖಲಿಸುವಂತೆ BCI ನಿರ್ದೇಶನ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
