ಸಪ್ತಪದಿ ತುಳಿಯದೇ ಕೇವಲ ನೋಂದಣಿಯಾದ ಮಾತ್ರಕ್ಕೆ ಮದುವೆ ಮಾನ್ಯವಲ್ಲ- ಹೈಕೋರ್ಟ್
ಅಹಮದಾಬಾದ್: ಸಪ್ತಪದಿ ತುಳಿಯದೇ ಸಾಂಪ್ರದಾಯಿಕ ವಿಧಿವಿಧಾನಗಳನ್ನ ನಡೆಸದೇ ಕೇವಲ ನೋಂದಣಿಯಾದ ಮಾತ್ರಕ್ಕೆ ಮದುವೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ. ಇಳೇಶ್ ವೋರಾ ಹಾಗೂ ನ್ಯಾ. ಆರ್.ಟಿ. ವಚ್ಚನಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಸಮಾರಂಭಗಳನ್ನು ನಡೆಸದೆ, ಕೇವಲ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಮದುವೆ ಎಂಬುದು ಕೇವಲ ಹಾಡು ಮತ್ತು ನೃತ್ಯಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ…
ಬ್ರಿಟನ್ನಲ್ಲಿ ವಾಸವಿರುವ ವ್ಯಕ್ತಿ ಹಾಗೂ ಅಹಮದಾಬಾದ್ ಮಹಿಳೆ ಮಧ್ಯೆ ಯಾವುದೋ ಒಂದು ಸಂದರ್ಭದಲ್ಲಿ ಮದುವೆ ನೋಂದಣಿ ಮಾತ್ರ ಆಗಿತ್ತು. ಆದರೆ ಇವರು ಹಿಂದೂ ಸಂಪ್ರದಾಯದ ಪ್ರಕಾರ ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದು ಧಾರ್ಮಿಕ ವಿಧಿವಿಧಾನಗಳ ಮೂಲಕ ವಿವಾಹವೇ ಆಗಿಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಇಬ್ಬರೂ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ‘ನಾವು ಸಾಂಪ್ರದಾಯಿಕವಾಗಿ ವಿವಾಹವಾಗಿಲ್ಲ. ಕೇವಲ ನೋಂದಣಿ ಮಾತ್ರ ಆಗಿದೆ. ನಾವಿಬ್ಬರೂ ಪತಿ-ಪತ್ನಿ ಆಗಿ ಎಂದೂ ಜೀವನ ನಡೆಸಿಲ್ಲ. ಹಾಗಾಗಿ ಈ ಮದುವೆ ಅನೂರ್ಜಿತಗೊಳಿಸಬೇಕು’ ಎಂದು ಮನವಿ ಮಾಡಿದ್ದರು.
ಆದರೆ ಕುಟುಂಬ ನ್ಯಾಯಾಲಯ ಮದುವೆಯನ್ನು ಮಾನ್ಯ ಎಂದು ಹೇಳಿತ್ತು. ಹೀಗಾಗಿ ಅರ್ಜಿದಾರರು ಹೈಕೋರ್ಟ್ಗೆ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾ. ಇಳೇಶ್ ವೋರಾ ಹಾಗೂ ನ್ಯಾ. ಆರ್.ಟಿ. ವಚ್ಚನಿ ಅವರಿದ್ದ ವಿಭಾಗೀಯ ಪೀಠ, ‘ಸಪ್ತಪದಿಯ ಮೂಲಕ ಪವಿತ್ರ ಅಗ್ನಿಯ ಮುಂದೆ ವಧುವರರು ಒಟ್ಟಿಗೆ 7 ಹೆಜ್ಜೆಇಡುವುದು ಮದುವೆಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಕಾನೂನು ಸ್ಥಾನಮಾನ ಒದಗಿಸುತ್ತದೆ.
ಹಿಂದೂ ಕಾನೂನಿ ನಡಿಯಲ್ಲಿ, ಮದುವೆಯನ್ನು ಒಂದು ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ. ಕೇವಲ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯ ವಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
