03/07/2026

Law Guide Kannada

Online Guide

ಅಪಘಾತ ವಿಮಾ ಪರಿಹಾರ ಪಡೆಯಲು ಮೃತರ 2ನೇ ಪತ್ನಿಗೂ ಹಕ್ಕಿದೆ – ಹೈಕೋರ್ಟ್

ಬೆಂಗಳೂರು: ಅಪಘಾತ ಪ್ರಕರಣಗಳಲ್ಲಿ ಮೃತರ 2ನೇ ಪತ್ನಿಗೂ ವಿಮಾ ಪರಿಹಾರ ಸಿಗುತ್ತದೆಯೇ ಇಲ್ಲವೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.

ಅಪಘಾತ ವಿಮಾ ಪರಿಹಾರಕ್ಕೆ ಮೃತರ 2ನೇ ಪತ್ನಿಯೂ ಅರ್ಹರು. ಎರಡನೇ ಪತ್ನಿಗೂ ಅಪಘಾತ ಪರಿಹಾರ ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ಕೋರಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠವು, ಮೋಟಾರು ವಾಹನ ಕಾಯ್ದೆ ಅಡಿ ಅಪಘಾತ ಪರಿಹಾರವನ್ನು ನಿರ್ಧರಿಸುವಾಗ ಮೃತರ ಮೇಲಿನ ಆರ್ಥಿಕ ಅವಲಂಬನೆ ಮುಖ್ಯವಾಗುತ್ತದೆಯೇ ಹೊರತು ಕಾನೂನಾತ್ಮಕ ಸ್ಥಾನಮಾನವಲ್ಲ ಎಂದು ಸ್ಪಷ್ಟಪಡಿಸಿತು.

ಮೃತರ ಮೊದಲ ಮತ್ತು ಎರಡನೇ ಪತ್ನಿಯರು ಪರಿಹಾರದ ಮೊತ್ತವನ್ನು ಶೇ. 50 ಹಂಚಿಕೊಳ್ಳಲು ಒಪ್ಪಂದ ಮಾಡಿರುವುದನ್ನು ದಾಖಲಿಸಿಕೊಂಡಿದ್ದು, ಪರಿಹಾರವನ್ನು 15.10 ಲಕ್ಷ ರೂ.ನಿಂದ 30.12 ಲಕ್ಷ ರೂ.ಗೆ ಏರಿಸಿ ಆದೇಶಿಸಿದೆ.

2019ರ ಮಾರ್ಚ್ ನಲ್ಲಿ 34 ವರ್ಷದ ದಾವಣಗೆರೆಯ ರೈತರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅಪಘಾತ ಪರಿಹಾರ ಕೋರಿ ಮೃತನ ಮೊದಲ ಪತ್ನಿ ಮತ್ತು ತಾಯಿ ಅಪಘಾತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಮೃತರ ಎರಡನೇ ಪತ್ನಿ ಮತ್ತು 8 ವರ್ಷದ ಅಪ್ರಾಪ್ತ ಮಗಳು ಕೂಡ ತಮಗೂ ಪರಿಹಾರದ ಹಕ್ಕಿದೆ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ವಿವಾಹದ ಕಾನೂನುಬದ್ಧತೆಯನ್ನು ನಿರ್ಧರಿಸುವ ವ್ಯಾಪ್ತಿ ಈ ಕೋರ್ಟ್ಗಿಲ್ಲ ಎಂದು ನ್ಯಾಯಮಂಡಳಿ ತಿಳಿಸಿತ್ತು.

ಹಾಗೆಯೇ ಪರಿಹಾರವನ್ನು ಪಾಲು ಹಂಚಿಕೆ ಮಾಡದೆ 15.10 ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸುಪ್ರೀಂ ಕೋರ್ಟ್ ಹಿಂದೆ ನೀಡಿರುವ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿ ಈ ಆದೇಶ ನೀಡಿದ್ದು ಪರಿಹಾರವನ್ನ ಹಂಚಿಕೆ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.