07/07/2026

Law Guide Kannada

Online Guide

ಸರ್ಕಾರಿ ಬಂಗಲೆ, ಕಾರು ತ್ಯಜಿಸಿ ಅರ್ಧ ಸಂಬಳ ಸಾಕೆಂದ ಜಡ್ಜ್ : ಈ ನ್ಯಾಯ ಸೇವಕರ ಸರಳತೆಯ ನಡೆಗೆ ಮೆಚ್ಚುಗೆಯ ಮಹಾಪೂರ

ಬೆಂಗಳೂರು,ಜುಲೈ,7,2026 (www.justkannada.in): ಸರ್ಕಾರಿ ಕೆಲಸ, ಸರ್ಕಾರಿ ಬಂಗಲೆ, ಸರ್ಕಾರದಿಂದ ವೇತನವಾಗಿ ಬರುವ ಹಣವೂ ಸಾಕಾಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ದೇಶದಲ್ಲಿ ಭ್ರಷ್ಟತೆಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇವರ ಮಧ್ಯೆ ಇಲ್ಲೊಬ್ಬರು ನ್ಯಾಯಾಧೀಶರು ತಮಗೆ ಸಿಕ್ಕಿರುವ ಸರ್ಕಾರಿ ಬಂಗಲೆ, ಸರ್ಕಾರಿ ಕಾರನ್ನು ತ್ಯಜಿಸಿರುವುದಲ್ಲದೇ ತಮಗೆ ಅರ್ಧ ಸಂಬಳ ಸಾಕು ಎಂದು ಮನವಿ ಮಾಡಿ ಸರಳತೆ ತೋರಿಸಿದ್ದು ಇವರ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಹಪೂರವೇ ಹರಿದು ಬರುತ್ತಿದೆ.

ಹೌದು, ನ್ಯಾಯಾಲಯದಲ್ಲಿ ನ್ಯಾಯಾಕಾಂಕ್ಷಿಯಾಗಿ ತಾಯಿಯ ಹೋರಾಟದಿಂದ ಸ್ಫೂರ್ತಿ ಪಡೆದ ಮಧ್ಯಪ್ರದೇಶದ ನ್ಯಾಯಾಧೀಶರೊಬ್ಬರು ಸರ್ಕಾರಿ ಬಂಗಲೆ, ಅಧಿಕೃತ ಕಾರು ತಿರಸ್ಕರಿಸಿ ಅರ್ಧ ಸಂಬಳವೇ ಸಾಕೆಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದ ಚಿಂದ್ವಾರದಲ್ಲಿರುವ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿರುವ ಅಕ್ಷಯ್ ಕುಮಾರ್ ದ್ವಿವೇದಿ ಅವರೇ ಈ ರೀತಿಯಾಗಿ ಸರಳತೆಗೆ ಸಾಕ್ಷಿಯಾಗಿದ್ದಾರೆ. ಸರ್ಕಾರಿ ಬಂಗಲೆ ಮತ್ತು ಅಧಿಕೃತ ಕಾರು ಮುಂತಾದ ಅಧಿಕೃತ ಸವಲತ್ತುಗಳನ್ನು ತಿರಸ್ಕರಿಸಲು, ಸ್ವಂತ ಊಟವನ್ನು ಬೇಯಿಸಲು ಮತ್ತು ತಮ್ಮ ಸಂಬಳವನ್ನು ಅರ್ಧಕ್ಕೆ, ಇಳಿಸಲು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಅವರ ಆಯ್ಕೆಗಳು ಮತ್ತು ಕಾನೂನು ತತ್ತ್ವಶಾಸ್ತ್ರವು ಅವರು ಚಿಕ್ಕವರಿದ್ದಾಗ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಅವರ ತಾಯಿ ಮಾಡಿದ ಹೋರಾಟಗಳಿಂದ ಆಳವಾಗಿ ಪ್ರೇರಿತವಾಗಿದೆ. ಪ್ರಮಾಣಿತ ನ್ಯಾಯಾಂಗ ಸೌಲಭ್ಯಗಳನ್ನು ಪಡೆಯುವ ಬದಲು, ಅವರು ತ್ವರಿತ ನ್ಯಾಯವನ್ನು ತಲುಪಿಸುವ ಮತ್ತು ಸಾಧಾರಣ ಜೀವನವನ್ನು ನಡೆಸುವತ್ತ ಸಂಪೂರ್ಣವಾಗಿ ಗಮನಹರಿಸುತ್ತಾರೆ, ತಮ್ಮ ತಾಯಿಯ ನ್ಯಾಯಾಲಯದ ಹೋರಾಟದಿಂದ ಸ್ಪೂರ್ತಿ ಪಡೆದ ಅವರು, ಹುದ್ದೆಯ ಸವಲತ್ತುಗಳಿಗಿಂತ ನ್ಯಾಯಸೇವೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ನ್ಯಾಯಾಧೀಶ ದ್ವಿವೇದಿ ಅವರು ಸರ್ಕಾರದಿಂದ ದೊರೆಯುವ ಅಧಿಕೃತ ಬಂಗಲೆ, ಸರ್ಕಾರಿ ವಾಹನ ಹಾಗೂ ಇತರ ಸೌಲಭ್ಯಗಳನ್ನು ಬಳಸಲು ನಿರಾಕರಿಸಿದ್ದಾರೆ. ಬದಲಾಗಿ, ಅವರು ಸಾಧಾರಣ ಕೊಠಡಿಯಲ್ಲಿ ವಾಸಿಸುತ್ತಿದ್ದು, ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಪ್ರತಿದಿನ ನಡೆದುಕೊಂಡೇ ನ್ಯಾಯಾಲಯಕ್ಕೆ ತೆರಳುತ್ತಾರೆ. ಹಾಗೆಯೇ ತಮ್ಮ ಸಂಬಳವನ್ನು ಅರ್ಧಕ್ಕೆ ಇಳಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು ಅವರ ಬಳಿ ಅತಿ ಕಡಿಮೆ ವೈಯಕ್ತಿಕ ವಸ್ತುಗಳು, ತಾಯಿ ಉಡುಗೊರೆಯಾಗಿ ನೀಡಿದ ಮೊಬೈಲ್ ಫೋನ್ ಇದೆ ಎಂದು ಹೇಳಲಾಗುತ್ತಿದೆ.

ದ್ವಿವೇದಿ ಅವರು ವಿವಾಹವಾಗದಿರಲು ನಿರ್ಧರಿಸಿದ್ದು, ತಮ್ಮ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಕನಿಷ್ಠ, ಸೌಲಭ್ಯಗಳಷ್ಟೇ ಸಾಕು; ಆಡಳಿತವು ಎಲ್ಲಿ ಸೇವೆಗೆ ನಿಯೋಜಿಸಿದರೂ ಅಲ್ಲಿಗೆ ತೆರಳಲು ಸಿದ್ದ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಬಾಲ್ಯದಲ್ಲಾದ ಅನುಭವಗಳೇ ಈ ನಡೆಗೆ ಕಾರಣ…
ಇನ್ನು ನ್ಯಾಯಾಧೀಶರಾದ ದ್ವಿವೇದಿ ಅವರ ಈ ಜೀವನದೃಷ್ಟಿಗೆ ಬಾಲ್ಯದ ಅನುಭವಗಳೇ ಕಾರಣವೆಂದು ಹೇಳಲಾಗುತ್ತದೆ. ಆಸ್ತಿ ವಿವಾದವೊಂದರ ಸಂಬಂಧ ತಮ್ಮ ತಾಯಿ ಹಲವು ವರ್ಷಗಳ ಕಾಲ ನ್ಯಾಯಾಲಯಗಳ ಮೆಟ್ಟಿಲೇರುತ್ತಿದ್ದನ್ನು ಅವರು ಬಾಲ್ಯದಲ್ಲೇ ನೋಡಿದ್ದರು. ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಕುಟುಂಬ ಅನುಭವಿಸಿದ ಮಾನಸಿಕ ಹಾಗೂ ಆರ್ಥಿಕ ಸಂಕಷ್ಟವು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತ್ತು. ಅದೇ ಅನುಭವವು ಅವರನ್ನು ನ್ಯಾಯಾಂಗ ಸೇವೆಗೆ ಬರಲು ಪ್ರೇರೇಪಿಸಿತು. ಸಾಮಾನ್ಯ ದಾವೆದಾರರು ಎದುರಿಸುವ ಕಷ್ಟಗಳನ್ನು ಅವರು ನೇರವಾಗಿ ಅರಿತಿದ್ದರಿಂದ, ನ್ಯಾಯವನ್ನು ತ್ವರಿತವಾಗಿ ಒದಗಿಸಬೇಕೆಂಬ ಸಂಕಲ್ಪ ಅವರಲ್ಲಿ ಬಲವಾಗಿ ಬೆಳೆದಿದೆ.

ವಿಶೇಷವಾಗಿ ಭೂಮಿ ಮತ್ತು ಆಸ್ತಿ ಸಂಬಂಧಿತ ಪ್ರಕರಣಗಳು ಅನಗತ್ಯ ವಿಳಂಬವಿಲ್ಲದೆ ಶೀಘ್ರವಾಗಿ ಇತ್ಯರ್ಥವಾಗುವಂತೆ್ ದ್ವಿವೇದಿ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ. ನ್ಯಾಯಕ್ಕಾಗಿ ವರ್ಷಗಳ ಕಾಲ ಕಾಯುವ ಪರಿಸ್ಥಿತಿ ಕಡಿಮೆಯಾಗಬೇಕು ಅವರ ಜೀವನದರ್ಶನದ ಮೂಲಭೂತ ತತ್ವವೆಂದರೆ, “ಸಾರ್ವಜನಿಕ ಹುದ್ದೆ ಎಂಬುದು ವಿಶೇಷ ಸವಲತ್ತು ಅಲ್ಲ; ಅದು ಒಂದು ಜವಾಬ್ದಾರಿ. ಸಾರ್ವಜನಿಕ ಉತ್ತರದಾಯಿತ್ಯ, ಸರ್ಕಾರಿ ವೆಚ್ಚದ ಮಿತವ್ಯಯ ಹಾಗೂ ಸಂಸ್ಥೆಗಳ ಮೇಲಿನ ಜನರ ವಿಶ್ವಾಸದ ಕುರಿತು ಚರ್ಚೆಗಳು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ, ಇಂತಹ ನಡೆ ಸಹಜವಾಗಿಯೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.