ಆಸ್ಪತ್ರೆ ಮುಖ್ಯಸ್ಥರ ನಡೆಗೆ ಹೈಕೋರ್ಟ್ ಗರಂ: ತಜ್ಞ ವೈದ್ಯರೊಬ್ಬರ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು
ಬೆಂಗಳೂರು: ಎರಡು ದಶಕಗಳ ಕಾಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಂತರ ಮತ್ತೊಂದು ಪ್ರಸಿದ್ದ ಆಸ್ಪತ್ರೆಗೆ ನಿರ್ದೇಶಕರಾಗಿ ಹೋದದ್ದನ್ನು ಸಹಿಸದೆ ವೈದ್ಯರೊಬ್ಬರ ವಿರುದ್ದ’ಪ್ರತೀಕಾರದ ಸಾಧನವಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದ ಆಸ್ಪತ್ರೆಯ ಮುಖ್ಯಸ್ಥರ ನಡೆಗೆ ಹೈಕೋರ್ಟ್ ಕಿಡಿಕಾರಿದೆ.
ನಗರದ ಹೆಸರಾಂತ ಆಸ್ಪತ್ರೆಯೊಂದರ ಕ್ಯಾನ್ಸರ್ ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿ ಮತ್ತೊಂದು ಹೆಸರಾಂತ ಆಸ್ಪತ್ರೆಗೆ ನಿರ್ದೇಶಕರಾಗಿ ಹೋಗಿದ್ದಕ್ಕೆ ವೈದ್ಯ ಡಾ.ಎಸ್.ಪಿ.ಸೋಮಶೇಖರ್ ವಿರುದ್ಧ ಫೋರ್ಜರಿ ಆರೋಪದಡಿ ಆಸ್ಪತ್ರೆಯ ಮುಖ್ಯಸ್ಥರು ಕ್ರಿಮಿನಲ್ ಕೇಸು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ‘ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ‘ಆ್ಯಸ್ಟರ್ ಡಿಎಂ ಹೆಲ್ತ್ಕೇರ್ ಸಂಸ್ಥೆ’ಯ ನಿರ್ದೇಶಕರೂ ಆಗಿರುವ ಡಾ.ಎಸ್.ಪಿ.ಸೋಮಶೇಖರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ರೋಗಿಗಳನ್ನು ಗುಣಪಡಿಸುವ ಉದಾತ್ತ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ವೃತ್ತಿಪರ ವೈದ್ಯರಿಗೆ ಮೊಕದ್ದಮೆಗಳ ಭೀತಿ ಮತ್ತು ಅಡಚಣೆ ಇಲ್ಲದಂತಿರಬೇಕು’ ಎಂದು ಅಭಿಪ್ರಾಯಪಟ್ಟಿದೆ.
“ಅರ್ಜಿದಾರರ ವಿರುದ್ದ ಹೊರಿಸಲಾದ ಆರೋಪಗಳು ಅಪರಾಧದ ಮಜಲುಗಳೇನು ಎಂಬುದನ್ನು ಬಹಿರಂಗಪಡಿಸಲು ವಿಫಲವಾಗಿವೆ. ಕನಿಷ್ಠ ಸಂಗತಿಗಳಿಗೆ ಕ್ರಿಮಿನಲ್ ಕಾನೂನಿನ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅರ್ಜಿದಾರ ವೈದ್ಯರಿಗೆ ತೀವ್ರ ಅನ್ಯಾಯವನ್ನು ಉಂಟುಮಾಡುತ್ತದೆ. ಮಾತ್ರವಲ್ಲ, ವೈದ್ಯಕೀಯ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸುವ ಪ್ರಕ್ರಿಯೆಯ ಮೇಲೂ ಭೀತಿಯ ಛಾಯೆಯನ್ನು ಮೂಡಿಸುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದ್ದರೂ ಅದನ್ನು ತಿರಸ್ಕರಿಸಿ ವಿಚಾರಣೆಗೆ ಅನುವು ಮಾಡಿಕೊಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಖಾಸಗಿ ವಿಧಿವಿಜ್ಞಾನ ಸಂಸ್ಥೆ ವರದಿಗೆ ಯಾವುದೇ ವಿಶ್ವಾಸಾರ್ಹತೆ ನೀಡಲಾಗುವುದಿಲ್ಲ. ವಿಧಿವಿಜ್ಞಾನ ಪರೀಕ್ಷೆಯನ್ನು ಏನಿದ್ದರೂ ರಾಜ್ಯ ಸರ್ಕಾರ ಸ್ಥಾಪಿಸಿದ ಅಧಿಕೃತ ಸರ್ಕಾರಿ ಪ್ರಯೋಗಾಲಯದಿಂದಲೇ ಮಾಡಬೇಕು’ ಎಂದು ಉಲ್ಲೇಖಿಸಿದೆ.
‘ಪ್ರತೀಕಾರದ ಸಾಧನವಾಗಿ ಕ್ರಿಮಿನಲ್ ಕಾನೂನನ್ನು ಬಳಸಿಕೊಂಡಿರುವುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಆರೋಪಗಳು ಸ್ಪಷ್ಟವಾಗಿ ಗಂಭೀರ ಸ್ವರೂಪದ ಅಪರಾಧವನ್ನಾಗಲಿ ಅಥವಾ ಅಪರಾಧ ಕೃತ್ಯಕ್ಕೆ ಸಮಾನವಾದ ನಿರ್ಲಕ್ಷ್ಯವನ್ನಾಗಲಿ ಹೊರಗೆಡಹದ ಹೊರತು, ವೈದ್ಯರನ್ನು ಕ್ರಿಮಿನಲ್ ಕಾನೂನಿನ ವ್ಯಾಪ್ತಿಗೆ ಎಳೆದು ತರಬಾರದು’ ಎಂದು ನ್ಯಾಯಪೀಠ ನುಡಿದಿದೆ.
ಪದಾಂಕಿತ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಅರ್ಜಿದಾರರ ಪರ ವಾದ ಮಂಡಿಸಿದ್ದರು. ಹೈಕೋರ್ಟ್ ವಕೀಲ ರಜತ್ ವಕಾಲತ್ತು ವಹಿಸಿದ್ದರು.
ಪ್ರಕರಣದ ವಿವರ..
ಡಾ.ಸೋಮಶೇಖರ್ ಅವರು 2003ರಲ್ಲಿ ದೇಶದ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಸಂಸ್ಥೆಗೆ ಸೇರಿ 2022ರ ಸೆಪ್ಟೆಂಬರ್ 1ರವರೆಗೆ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಆ ಆಸ್ಪತ್ರೆಯ ಅಂಕಾಲಜಿ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಮತ್ತೊಂದು ಹೆಸರಾಂತ ವೈದ್ಯಕೀಯ ಸಂಸ್ಥೆಯಾದ ‘ಆ್ಯಸ್ಟರ್ ಡಿಎಂ ಹೆಲ್ತ್ಕೇರ್’ ಆಸ್ಪತ್ರೆಯ ನಿರ್ದೇಶಕರಾಗಿ ನೇಮಕವಾದರು. ಈ ನಡುವೆ ಮೊದಲಿದ್ದ ಸಂಸ್ಥೆಯ ಅನುಭವವನ್ನು ಅನುಭವ ಪ್ರಮಾಣ ಪತ್ರದ ಮೂಲಕ ‘ಆ್ಯಸ್ಟರ್ ಡಿಎಂ ಹೆಲ್ತ್ಕೇರ್’ ಸಂಸ್ಥೆಗೆ ಸಲ್ಲಿಸಿದ್ದರು.
‘ಈ ಅನುಭವ ಪ್ರಮಾಣ ಪತ್ರವು ನಕಲಿ. ಇದರಲ್ಲಿರುವ ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದೆ’ ಎಂದು ಆರೋಪಿಸಿ ಮೊದಲಿದ್ದ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ.ಬಿ.ಸಿ.ಶಂಕರ್ ಜೆ.ಬಿ.ನಗರ ಪೊಲೀಸ್ ಠಾಣೆಗೆ 2022ರ ಡಿಸೆಂಬರ್ 10ರಂದು ದೂರು ನೀಡಿದ್ದರು.
ಇದರನ್ವಯ ಪೊಲೀಸರು ಡಾ.ಸೋಮಶೇಖರ್ ವಿರುದ್ಧ; ಭಾರತೀಯ ದಂಡ ಸಂಹಿತೆ-1860ರ ಕಲಂ 465 ಮತ್ತು 471ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಮುಂದಿನ ನ್ಯಾಯಿಕ ಕ್ರಮಕ್ಕಾಗಿ ಮೆಯೊಹಾಲ್ನ 10ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ರವಾನಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
