ಶ್ವಾನಪ್ರಿಯರಿಗೆ ಶಾಕ್: ಸಾಕುನಾಯಿಗಳು ಕಚ್ಚಿದ್ರೆ ಮಾಲೀಕರೇ ಹೊಣೆ – ಹೈಕೋರ್ಟ್
ಬೆಂಗಳೂರು: ನಾಯಿಗಳನ್ನು ಸಾಕುವ ಮಾಲೀಕರು ಜವಾಬ್ದಾರಿಯಿಂದ ನಡೆದುಕೊಳ್ಳದೇ ಸಾಕುನಾಯಿಗಳು ಬೇರೆಯವರಿಗೆ ಕಚ್ಚಿದರೇ ಅದಕ್ಕೆ ಮಾಲೀಕರೇ ಹೊಣೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿ ಶ್ವಾನಪ್ರಿಯರಿಗೆ ಶಾಕ್ ಕೊಟ್ಟಿದೆ.
ಮಹಿಳೆಯೊಬ್ಬರ ಮುಖಕ್ಕೆ ನಾಯಿ ಕಚ್ಚಿದ ಪ್ರಕರಣದಲ್ಲಿ ನಾಯಿ ಮಾಲೀಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ನಾಯಿಯನ್ನು ಕಟ್ಟಿಹಾಕದೆ ಬಿಟ್ಟು, ಅದರಿಂದ ಬೇರೆಯವರ ಮೇಲೆ ದಾಳಿಯಾದರೆ, ಘಟನೆಗೆ ನಾಯಿ ಸಾಕುವ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಇಂದಿರಾನಗರದ ಲಲಿತಾ ಗೋಪಾಲಕೃಷ್ಣನ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ಸಂಬಂಧ ನಡೆದ ಮಹಜರು ಮತ್ತು ವೈದ್ಯಕಿಯ ವರದಿಯಲ್ಲಿ ಯಾವುದೇ ಗಾಯದ ಗುರುತುಗಳ ಬಗ್ಗೆ ದಾಖಲೆ ಇಲ್ಲ. ಅಷ್ಟಕ್ಕೂ ನಾಯಿಗೆ ದೂರುದಾರರು ಪರಿಚಿತರೇ ಆಗಿದ್ದು, ಅದರ ಬಳಿ ಅವರೇ ಮುಖವೊಡ್ಡಿದ್ದರು. ಈ ನಾಯಿಯ ತಳಿ ಅಪಾಯಕಾರಿಯಲ್ಲ. ಆದರೂ ಮಹಿಳೆ ಹಣಕ್ಕಾಗಿ ಈ ದೂರು ದಾಖಲಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಆದರೆ ಅರ್ಜಿದಾರರ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠವು, ನಾಯಿಯನ್ನು ಕಟ್ಟಿಹಾಕದೇ ಬಿಟ್ಟಿದ್ದು ಬೇಜವಾಬ್ದಾರಿ. ನಾಯಿ ಮಾಲೀಕರು ಜವಾಬ್ದಾರಿಯಿಂದ ಇರಬೇಕು. ಇದು ಎಲ್ಲರಿಗೂ ಎಚ್ಚರಿಕೆಯ ಪಾಠವಾಗಲಿ. ಬೇಜವಾಬ್ದಾರಿ ತೋರುವ ನಾಯಿಗಳ ಮಾಲೀಕರ ಮೇಲಿನ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆದ್ದರಿಂದ ತನ್ನನ್ನು ಆರೋಪ ಮುಕ್ತಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆದುಕೊಂಡರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
