11/07/2026

Law Guide Kannada

Online Guide

ಸಿವಿಲ್ ವ್ಯಾಜ್ಯಗಳ ಹೊರೆ ಇಳಿಸುವ ತಿದ್ದುಪಡಿ: ಕಾಯ್ದೆಗೆ ಅಸ್ತು ಎಂದ ಹೈಕೋರ್ಟ್

ಬೆಂಗಳೂರು: ಇನ್ಮುಂದೆ ಸಿವಿಲ್ ವ್ಯಾಜ್ಯಗಳ ಮೇಲ್ಮನವಿಗಳು ಜಿಲ್ಲಾ ನ್ಯಾಯಾಲಯಗಳಲ್ಲೇ ವಿಚಾರಣೆ ನಡೆಯಲಿವೆ. 2007ರಿಂದ ಹೈಕೋರ್ಟ್ನಲ್ಲಿ ಬಾಕಿ ಇರುವ ಮೇಲ್ಮನವಿಗಳೆಲ್ಲಾ ಜಿಲ್ಲಾ ನ್ಯಾಯಾಲಯದಲ್ಲೇ ತೀರ್ಮಾನವಾಗಲಿದ್ದು ಈ ಮೂಲಕ ಹೈಕೋರ್ಟ್ ಗೆ ಹೊರೆ ತಗ್ಗಲಿದೆ.

ಹೈಕೋರ್ಟ್ನಲ್ಲಿ ಅಪಾರ ಸಂಖ್ಯೆಯಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯಗಳ ಹೊರೆ ತಗ್ಗಿಸಲು ಮತ್ತು ನಿಯಮಿತ ಪ್ರಥಮ ಮೇಲ್ಮನವಿಗಳನ್ನು (ಆರ್ಎಫ್ಎ) ನಿರ್ಧರಿಸಲು ತೆಗೆದುಕೊಳ್ಳಲಾಗುವ ಸಮಯದ ಉಳಿತಾಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡಿದ್ದ ಸುಧಾರಣಾ ಕ್ರಮಕ್ಕೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ.

ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ ಮತ್ತು ಕರ್ನಾಟಕ ಹೈಕೋರ್ಟ್ ಕಾಯ್ದೆಗಳ ತಿದ್ದುಪಡಿಯ ಸಿಂಧುತ್ವವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠವು, ಎತ್ತಿಹಿಡಿದಿದ್ದು, ತಿದ್ದುಪಡಿ ಕಾಯ್ದೆಯು 2007ರ ಆಗಸ್ಟ್ 28ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಈಗಾಗಲೇ ತೀರ್ಮಾನಗೊಂಡಿರುವ ಡಿಕ್ರಿಗಳಿಗೆ ಮತ್ತು ಅವುಗಳಿಗೆ ನೀಡಲಾಗಿರುವ ತಡೆ ಆದೇಶಗಳು ಹಾಗೆಯೇ ಇರುತ್ತವೆ. ಹೈಕೋರ್ಟ್ನಲ್ಲಿರುವ ಪೆಂಡಿಂಗ್ ಮೇಲ್ಮನವಿಗಳು ಎಲ್ಲಿಗೆ ಬಂದು ನಿಂತಿವೆಯೋ ಅಲ್ಲಿಂದ ಮುಂದಕ್ಕೆ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಆಗುತ್ತವೆ ಮತ್ತು ಹೈಕೋರ್ಟ್ನಲ್ಲಿ ಈವರೆಗೆ ಆಗಿರುವ ಆದೇಶಗಳು ಸಿಂಧು ಆಗಿರುತ್ತವೆ’ ಎಂದೂ ವಿವರಿಸಿದೆ.

‘ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ-1964ರ ಕಾಯ್ದೆ ಅಡಿಯಲ್ಲಿ ಬೆಂಗಳೂರು ಹೊರತುಪಡಿಸಿದ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಗಳು ಮತ್ತು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಕಾಯ್ದೆ-1979 ಮತ್ತು ಕರ್ನಾಟಕ ಸಣ್ಣ ವ್ಯಾಜ್ಯ ನ್ಯಾಯಾಲಯಗಳ ಕಾಯ್ದೆ-1964ರ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಧೀಶರ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ’ ಎಂಬುದನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ಬೆಂಗಳೂರಿನಲ್ಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಮೂಲ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ನಗರ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುವವರು ಜಿಲ್ಲಾ ನ್ಯಾಯಾಧೀಶರ ಕೇಡರ್ನಲ್ಲಿರುವ ನ್ಯಾಯಾಧೀಶರು. ಹೀಗಾಗಿ, ಹೈಕೋರ್ಟ್ಗೆ ಇರುವ ಮೊದಲ ಮೇಲ್ಮನವಿಗಳು ಮತ್ತು ನಗರ ಸಿವಿಲ್ ನ್ಯಾಯಾಧೀಶರು ಮೂಲ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ಆದೇಶಗಳು, ತೀರ್ಪುಗಳು ಮತ್ತು ತೀರ್ಪುಗಳಿಂದ ಉಂಟಾಗುವ ಮೇಲ್ಮನವಿಗಳನ್ನು ಸೀಮಿತಗೊಳಿಸಿದ್ದಕ್ಕಾಗಿ ಹೈಕೋರ್ಟ್ ತಿದ್ದುಪಡಿ ಕಾಯ್ದೆಯನ್ನು ತಪ್ಪೆಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈವರೆಗೆ ₹5 ಲಕ್ಷ ಮೌಲ್ಯದ ಒಳಗಿನ ಅಸಲು ದಾವೆಗಳನ್ನು (ಒಎಸ್) ಸಿವಿಲ್ ಜಡ್ಜ್ ಮುನ್ನೀಫ್ ಕೋರ್ಟ್ಗಳು ವಿಚಾರಣೆ ನಡೆಸುತ್ತಿದ್ದವು. 5 ಲಕ್ಷಕ್ಕೂ ಮೇಲ್ಪಟ್ಟಿದ್ದರೆ ಮಿತಿಗೆ ಒಳಪಡದಂತೆ ಹಿರಿಯ ವಿಭಾಗಕ್ಕೆ ಬರುತ್ತಿದ್ದವು. ಈ ಕೋರ್ಟ್ ಗಳಲ್ಲಿ ನೀಡಲಾದ ಡಿಕ್ರಿಯನ್ನು ಪ್ರಶ್ನಿಸಲಾದ ಮೊದಲ ಮೇಲ್ಮನವಿಗಳಲ್ಲಿ 10 ಲಕ್ಷ ರೂ.ಮೌಲ್ಯದ ಒಳಗಿದ್ದರೆ ಜಿಲ್ಲಾ ನ್ಯಾಯಾಲಯಕ್ಕೆ ಹೋಗುತ್ತಿದ್ದವು. 10 ಲಕ್ಷ ರೂ. ಮೌಲ್ಯಕ್ಕೆ ಮೇಲ್ಪಟ್ಟಿದ್ದರೆ ನಿಯಮಿತ ಮೊದಲ ಮೇಲ್ಮನವಿಗಳಾಗಿ (ಆರ್ಎಫ್ಎ) ಹೈಕೋರ್ಟ್ಗೆ ಬರುತ್ತಿದ್ದವು. ಸರ್ಕಾರದ ತಿದ್ದುಪಡಿ ಮೂಲಕ ಇದನ್ನು ತಪ್ಪಿಸಿ 2007ರ ನಂತರದ ಎಲ್ಲಾ ಮೊದಲ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ನೀಡಲಾಗಿದೆ. ಈ ವಿಷಯದಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ಗೆ ಅನ್ವಯ ಆಗದಂತೆ ಇದನ್ನು ಬದಲಾವಣೆ ಮಾಡಲಾಗಿದೆ. ತಿದ್ದುಪಡಿಯ ಅನುಸಾರ ಈಗ ಕಿರಿಯ ವಿಭಾಗಕ್ಕೆ 15 ಲಕ್ಷ ಮಿತಿ ವಿಧಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.